ಮಂಗಳೂರು :ಮಲ್ಪೆ ಕಡಲ ಕಿನಾರೆಯಲ್ಲಿ ಕಳೆದ ಹಲವು ವರ್ಷಗಳಿಂದ ಮಲ್ಪೆ ಬೀಚ್ ಫ್ರೆಂಡ್ಸ್ ಆಯೋಜಿಸುತ್ತಿರುವ ದೀಪಾವಳಿ ಹಬ್ಬ ಪ್ರತಿವರ್ಷ ಸಾವಿರಾರು ಮಂದಿಯನ್ನು ಆಕರ್ಷಿಸುತ್ತಿದ್ದು, ಈ ವರ್ಷ ಇದೇ ನವೆಂಬರ್ 14ರಂದು ಸಂಜೆ ಗಂಟೆ 5.30ರಿಂದ ಆರಂಭವಾಗಲಿದೆ. ಭೂಮಿಯನ್ನು ಆದರ್ಶಪ್ರಾಯನಾಗಿ ಆಳ್ವಿಕೆ ನಡೆಸಿದ ಬಲಿ ಚಕ್ರವರ್ತಿಯ ನೆನಪಿನ ಹಬ್ಬವಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ.
ಕರಾವಳಿಯಲ್ಲಿ ನರಕ ಚತುರ್ದಶಿ – ಬಲಿಪಾಡ್ಯಮಿಯ ಸಂಭ್ರಮವನ್ನು ವಿಶಿಷ್ಟ ವಿಧಿ-ವಿಧಾನಗಳೊಂದಿಗೆ ಆಚರಿಸಲಾಗುತ್ತದೆ. ಇಂದಿನ ಆಧುನಿಕ ಜೀವನ ಪದ್ಧತಿಯಲ್ಲಿ ದೀಪಾವಳಿ ಹಬ್ಬವನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲು ಕಷ್ಟಸಾಧ್ಯವಾದರು ಪರಂಪರೆಯನ್ನು ಕಾಪಾಡಲಾಗುತ್ತಿದೆ. ಮಲ್ಪೆ ಬೀಚ್ ಫ್ರೆಂಡ್ಸ್ ಬೆಳಕಿನ ಹಬ್ಬ ದೀಪಾವಳಿಯನ್ನು ಹೆಚ್ಚಿನ ಸಂಭ್ರಮ ಉಲ್ಲಾಸದೊಂದಿಗೆ ಕಡಲಕಿನಾರೆಯ ತಂಪುಗಾಳಿಯ ನಡುವೆ ಆಚರಿಸಲು ಸಿದ್ಧತೆ ನಡೆಸಿದ್ದು ಹಬ್ಬದ ಪ್ರಯುಕ್ತ ವೈವಿಧ್ಯಮಯ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಮಲ್ಪೆ ಬೀಚಿನಲ್ಲಿ ಏರ್ಪಡಿಸಲಾಗಿದೆ. ಹಾಗೂ ಅತ್ಯಾಕರ್ಷಕವಾದ ಸುಡುಮದ್ದು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಮೂಡಬಿದಿರೆಯ ಡಾ.ಮೋಹನ ಆಳ್ವ ಮಾರ್ಗದರ್ಶನದಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮಕ್ಕೆ ಉದ್ಯಮಿ ಜಿ.ಶಂಕರ್ ಚಾಲನೆ ನೀಡಲಿದ್ದು, ಸ್ಥಳೀಯ ಶಾಸಕ ರಘುಪತಿ ಭಟ್ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ.ಮೋಹನ ಆಳ್ವ, ಪ್ರಮೋದ್ ಮಧ್ವರಾಜ್, ಪ್ರಭಾಕರ ತೊಟ್ಟಂ, ಮಾಜಿ ಶಾಸಕ ಯು.ಆರ್.ಸಭಾಪತಿ, ಹರಿಯಪ್ಪ ಕೋಟ್ಯಾನ್, ಯಶ್ ಪಾಲ್ ಸುವರ್ಣ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಫಯಾಜ್, ಆನಂದ ಪಿ.ಸುವರ್ಣ, ನಾಗರಾಜ ಸುವರ್ಣ ಮೊದಲಾದವರು ಭಾಗವಹಿಸಲಿರುವರು ಎಂದು ಮಲ್ಪೆ ಬೀಚ್ ಫ್ರೆಂಡ್ಸ್ ಅಧ್ಯಕ್ಷ ಭರತ್ ಕುಂದರ್ ತಿಳಿಸಿದ್ದಾರೆ.
Click this button or press Ctrl+G to toggle between Kannada and English