ಮಂಗಳೂರು : ವಿಶ್ವ ಕೊಂಕಣಿ ಕಲಾ ರತ್ನ, ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎರಿಕ್ ಅಲೆಕ್ಸಾಂಡರ್ ಒಝಾರಿಯೊ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸರಕಾರಿ ಗೌರವದೊಂದಿಗೆ ಸಂಗೀತಾರ್ಚಣೆಯ ಮೂಲಕ ರವಿವಾರ ನಡೆಯಿತು.
ಬೆಳಿಗ್ಗೆ ಸೈಂಟ್ ವಿನ್ಸೆಂಟ್ ಫೆರೆರ್ ಚರ್ಚ್ ವೆಲೆನ್ಶಿಯಾದಲ್ಲಿ ನಡೆದ ಅಂತ್ಯಸಂಸ್ಕಾರ ಬಲಿಪೂಜೆಯಲ್ಲಿಗೋವಾದ ವಂ. ಪ್ರತಾಪ್ ನಾಯಕ್ ಪ್ರವಚನ ನೀಡಿದರು. ಮಂಗಳೂರು ಬಿಷಪ್ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ, ವಿಶ್ರಾಂತ ಬಿಷಪ್ ಅ.ವಂ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಚರ್ಚ್ನಲ್ಲಿ ಅಂತಿಮ ನಮನ ಸಲ್ಲಿಸಿದರು.
ಧಾರ್ಮಿಕ ಸಾಂಸ್ಕೃತಿಕ ಹಾಗೂ ಸಂಗೀತ ಲೋಕದ ನೂರಾರು ಗಣ್ಯರು ಪಾಲ್ಗೊಂಡರು. ಬಲಿಪೂಜೆಯ ನಂತರ ನಡೆದ ಸರಕಾರಿ ಗೌರವ ಅರ್ಪಣೆ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ತ್ ಶಾಸಕ ಐವನ್ ಡಿ ಸೋಜಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್ ಮೊದಲಾದವರು ನೇತೃತ್ವ ನೀಡಿದರು.
ನಂತರ ಶಕ್ತಿನಗರದಲ್ಲಿರುವ ಎರಿಕ್ ಒಝೇರಿಯೊ ಅವರ ಕರ್ಮಭೂಮಿ ಕಲಾಂಗಣ್ ನಲ್ಲಿ ಅಭಿಮಾನಿಗಳಿಗೆ ಎರಿಕ್ ಅವರಿಗೆ ಅಂತಿಮ ಗೌರವ ಸಲ್ಲಿಸುವ ಅವಕಾಶವನ್ನು ಮಾಡಿಕೊಡಲಾಗಿತ್ತು. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಶತ್ತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಐವನ್ ಡಿ ಸೋಜಾ, ಮಾಜಿ ಶಾಸಕ ಜೆ.ಆರ್ ಲೋಬೊ, ಪ್ರಗತಿಪರ ಹೋರಾಟಗಾರ ನರೇಂದ್ರ ನಾಯಕ್, ಸಿಪಿಐಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಮೊದಲಾದವರು ಕಲಾಂಗಣ್ ನಲ್ಲಿ ಎರಿಕ್ ಅವರಿಗೆ ಅಂತಿಮ ನಮನಗಳನ್ನು ಸಲ್ಲಿಸಿದರು. ಇದೇ ವೇಳೆ ಮದರ್ ತೆರೆಸಾ ಬ್ಯಾಂಡ್ ಹೊನ್ನಾವರ, ಹಾಗೂ ಕಲಾಂಗಣ್ ಸಂಗೀತ ಕಲಾವಿದರಿಂದ ಎರಿಕ್ ಅವರಿಗೆ ಸಂಗೀತಾಂಜಲಿ ಕಾರ್ಯಕ್ರಮವು ನಡೆಯಿತು.
ಇನ್ನು ನೆರೆದ ಸಾವಿರಾರು ಎರಿಕ್ ಅಭಿಮಾನಿಗಳಿಗೆ ವಂದಿಸಿದ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ . ಜೆ. ಪಿಂಟೊ ಅವರು ಎರಿಕ್ ಅವರ ಸ್ಮರಣಾರ್ಥ ಕಲಾಂಗಣ್ ನಲ್ಲಿ ಮುಂದಿನ ದಿನಗಳಲ್ಲಿ ಹನ್ನೆರಡು ಗಂಟೆಗಳ ನಿರಂತರ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಘೋಷಿಸಿದರು. ನಂತರ ಎರಿಕ್ ಅವರ ಇಚ್ಛೆಯಂತೆ ಪಾರ್ಥೀವ ಶರೀರವನ್ನು ಮೆರವಣಿಗೆಯ ಮೂಲಕ ಬೋಳೂರು ಚಿತಾಗಾರಕ್ಕೆ ಕೊಂಡೊಯ್ದು ಅಗ್ನಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಯಿತು. ಸಾಮಾನ್ಯವಾಗಿ ಕ್ರೈಸ್ತರಲ್ಲಿ ಹೂಳುವ ಪದ್ಧತಿ , ಇಲ್ಲಿ ಅವರ ಇಚ್ಛೆಯಂತೆ ಅವರ ಚಿತಾ ಭಸ್ಮವನ್ನು ಕಲಾಂಗಣ್ ಸಮೀಪದ ಉದ್ಯಾನದ ವೃಕ್ಷಗಳಿಗೆ ಹಾಕಲಾಗುವುದು ಎಂದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಐವನ್ ಡಿಸೋಜ, ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್. ಲೋಬೊ, ಸಂಗೀತಾ ನಿರ್ದೇಶಕ ಗುರುಕಿರಣ್, ಮಂಗಳೂರು ಧರ್ಮ ಪ್ರಾಂತದ ಸಾರ್ವಜನಿಕ ಸಂಪರ್ಕಾಕಾರಿ ರಾಯ್ ಕ್ಯಾಸ್ಟಲಿನೋ, ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಜೋಕಿಂ ಸ್ಟಾನಿ ಅಲ್ವಾರಿಸ್, ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್., ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ, ಕೆಥೋಲಿಕ್ ಸಭಾ ಕೇಂದ್ರೀಯ ಸಮಿತಿ ಅಧ್ಯಕ್ಷ ಸಂತೋಷ್ ಡಿಸೋಜ, ಮಾಂಡ್ ಸೊಭಾಣ್ ಅಧ್ಯಕ್ಷ ಲೂಯಿ ಪಿಂಟೋ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









