ಮಂಗಳೂರು : ಮಂಗಳೂರು ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ದಲಿತ ಮಹಿಳೆಯೊಬ್ಬರ ಪಾದ ಪೂಜೆ ಹಾಗೂ ಅವರಿಂದಲೇ ಚಂಡಿಕಾ ಹೋಮದ ಎಲ್ಲಾ ಕಾರ್ಯಗಳನ್ನು ಮಾಡಿಸುವ ಮೂಲಕ ಜಾತಿಯ ಕಟ್ಟುಪಾಡು, ಧಾರ್ಮಿಕ ಕ್ಷೇತ್ರದಲ್ಲಿ ಲಿಂಗ ತಾರತಮ್ಯದ ಕಟ್ಟುಪಾಡುಗಳನ್ನು ದೂರ ಮಾಡುವ ಪ್ರಯತ್ನ ನಡೆಯಿತು. ಈ ಮೂಲಕ ದೇವಸ್ಥಾನಗಳು ಜಾತಿ ಕೇಂದ್ರಿತವಾಗಿರಬಾರದು ಹಾಗೂ ಮಹಿಳೆ ಎಂದೂ ಈ ಸಮಾಜಕ್ಕೆ ನಿಷಿದ್ಧವಲ್ಲ ಎಂಬ ಸಂದೇಶವನ್ನು ಮಂಗಳವಾರ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಸಮಾಜಕ್ಕೆ ನೀಡಿದರು.
ಮಂಗಳವಾರ ಬೆಳಗ್ಗೆ ಪರಿಶಿಷ್ಟ ಜಾತಿ ಮುಂಡಾಲ ಸಮಾಜಕ್ಕೆ ಸೇರಿದ ಅನಸೂಯ ಕುಮಾರಿ ಎಂಬ ನಿವೃತ್ತ ಶಿಕ್ಷಕಿಯೊಬ್ಬರು ಈ ಎಲ್ಲಾ ಕಾರ್ಯಗಳ ಕೇಂದ್ರ ಬಿಂದುವಾದರು. ಅನಸೂಯಾ ಕುಮಾರಿ ಅವರನ್ನು ಸ್ವತಃ ಜನಾರ್ದನ ಪೂಜಾರಿ ಸ್ವಾಗತಿಸಿ, ಅವರ ಪಾದ ತೊಳೆದು, ಶುದ್ಧಬಟ್ಟೆಯಿಂದ ಒರಸಿ ಪೂಜೆ ನೆರವೇರಿಸಿದರು, ಅನಸೂಯಾ ಕುಮಾರಿ ಚಂಡಿಕಾಹೋಮದ ಪೂರ್ಣಾಹುತಿಗೆ ರೇಶ್ಮೆ ಸೀರೆ ಅರ್ಪಿಸಿ ಧಾರ್ಮಿಕ ಕಾರ್ಯಗಳಿಗೆ ಇದ್ದ ಜಾತಿ ಕಟ್ಟಳೆಯನ್ನು ಮುರಿದರು.ಪೂಜಾರಿಯವರು ಅವರಿಗೆ ಹೂವು, ಕುಂಕುಮ ನೀಡಿ, ಹೆಣ್ಣು ಹುಟ್ಟಿದ ಬಳಿಕ ಆಕೆ ಸಾಯುವವರೆಗೂ ಸೌಭಾಗ್ಯವತಿಯಾಗಿಯೇ ಇರುತ್ತಾಳೆ, ಆಕೆ ಸದಾ ಗೌರವಕ್ಕೆ ಅರ್ಹಳು ಎನ್ನುವ ಸಂದೇಶ ನೀಡಿದರು. ದೇವರ ಒಳಾಂಗಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಬಳಿಕ ದೇವರ ಉತ್ಸವ ಮೂರ್ತಿಯನ್ನು ಹೊತ್ತ ಬೆಳ್ಳಿ ರಥವನ್ನು ಎಲ್ಲ ಮಹಿಳೆಯರು ಸೇರಿ ಮೂರು ಸುತ್ತು ಎಳೆದರು. ಧಾರ್ಮಿಕ ಕಾರ್ಯಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡುವ ಉದ್ದೇಶದಿಂದ ರಥ ಎಳೆಯುವ ಅವಕಾಶವನ್ನು ದೇವಸ್ಥಾನಕ್ಕೆ ಆಗಮಿಸಿದ್ದ ಎಲ್ಲ ಮಹಿಳೆಯರಿಗೂ ನೀಡಲಾಗಿತ್ತು.
ಬಳಿಕ ದೇವಸ್ಥಾನದ ಹೊರಾಂಗಣದಲ್ಲಿ ಮಡೆಸ್ನಾನ ವಿರೋಧಿಸಿ ಜನಾರ್ದನ ಪೂಜಾರಿ ಉರುಳು ಸೇವೆ ಮಾಡಿದರು. ಇದೇ ಸಂದರ್ಭದಲ್ಲಿ ಐದು ಸಾವಿರ ಮಹಿಳೆಯರಿಗೆ ತಲಾ ಐದು ಕೆ.ಜಿ. ಅಕ್ಕಿ ವಿತರಣೆ ಜನಾರ್ದನ ಪೂಜಾರಿ ನೇತೃತ್ವದಲ್ಲಿಯೇ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮೇಯರ್ ಗುಲ್ಜಾರ್ ಬಾನು, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಎಚ್. ಎಸ್. ಸಾಯಿರಾಂ, ಕಳ್ಳಿಗೆ ತಾರಾನಾಥ ಶೆಟ್ಟಿ, ಹರಿಕೃಷ್ಣ ಬಂಟ್ವಾಳ, ಮಾಜಿ ಮೇಯರ್ ಶಶಿಧರ ಹೆಗಡೆ, ಡಾ. ಬಿ. ಜಿ. ಸುವರ್ಣ, ಕೃಪಾ ಆಳ್ವ, ಪಾಲಿಕಯೆ ಮಾಜಿ ಆಯುಕ್ತ ಜೆ.ಆರ್.ಲೊಬೋ, ಮಾಜಿ ಸಂಸದೆ ತೇಜಸ್ವಿನಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತ ಗಟ್ಟಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English