ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಇಬ್ಬರು ಮಹಿಳಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ನಿವಾಸಿಗಳಾದ ಬಿ.ಬಿ.ಜಾನ್ (59) ಮತ್ತು ಅವರ ಮಗಳು ಮಸಾಭಿ @ ಆರತಿ (34) ಎಂದು ಗುರುತಿಸಲಾಗಿದೆ. ಈ ಖತಾರ್ನಾಕ್ ತಾಯಿ-ಮಗಳು ಐದು ತಿಂಗಳ ಕಾಲ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದರು.
ಕಳವು ಮತ್ತು ದೂರು ವಿವರ
ಆಂಧ್ರ ಪ್ರದೇಶ ರಾಜ್ಯದ ನೆಲ್ಲೂರು ನಿವಾಸಿ ಜೆ.ಲತಾ ಮತ್ತು ಅವರ ಕುಟುಂಬವು ಮೇ 3 ರಂದು ಸಂಜೆ 5:15 ರಿಂದ 6 ಗಂಟೆ ಅವಧಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದರು. ದರ್ಶನದ ವೇಳೆ ಇವರು ತಮ್ಮ ಬ್ಯಾಗ್ನಲ್ಲಿ ರೂ. 6,79,000 ಮೌಲ್ಯದ 97 ಗ್ರಾಂ ಚಿನ್ನಾಭರಣವನ್ನು ಇರಿಸಿದ್ದರು. ಉಡುಪಿಗೆ ತೆರಳುವಾಗ ಬ್ಯಾಗ್ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದ್ದು, ಜೆ.ಲತಾ ಅವರು ಮೇ 4 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪೊಲೀಸರ ಯಶಸ್ವಿ ಕಾರ್ಯಾಚರಣೆ
ಕಳ್ಳತನ ಪ್ರಕರಣ ದಾಖಲಾದ ನಂತರ ಧರ್ಮಸ್ಥಳ ಪೊಲೀಸರು ಐದು ತಿಂಗಳಿನಿಂದ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದರು. ಆರೋಪಿಗಳು ವಿವಿಧ ಕಡೆ ಪ್ರಯಾಣಿಸಿ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದರು. ಕೊನೆಗೆ, ನವೆಂಬರ್ 23 ರಂದು (ಭಾನುವಾರ) ಆರೋಪಿಗಳು ಮತ್ತೆ ಕಳ್ಳತನ ಮಾಡುವ ಉದ್ದೇಶದಿಂದ ಧರ್ಮಸ್ಥಳದ ದ್ವಾರಕ ಬಳಿ ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯನ್ನು ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ಅವರ ತಂಡವು ನಡೆಸಿದೆ.
ಮುಂದಿನ ಕಾನೂನು ಪ್ರಕ್ರಿಯೆ ಮತ್ತು ವಶಪಡಿಸಿಕೊಂಡ ವಸ್ತು
ಬಂಧಿತ ಆರೋಪಿಗಳನ್ನು ನವೆಂಬರ್ 23 ರಂದು ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ನವೆಂಬರ್ 24 ರಂದು ಹೆಚ್ಚಿನ ತನಿಖೆಗಾಗಿ ಅವರನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಯಿತು. ವಿಚಾರಣೆ ನಡೆಸಿದ ಬಳಿಕ, ನವೆಂಬರ್ 25 ರಂದು ಆರೋಪಿಗಳ ಹುಬ್ಬಳಿ ಮನೆಯಲ್ಲಿ ಮಹಜರು ನಡೆಸಿ, ಕಳವು ಮಾಡಿದ ಪೈಕಿ ರೂ. 5,32,000 ಮೌಲ್ಯದ 76 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ಮತ್ತು ಮಹಜರು ಮುಗಿದ ನಂತರ, ನವೆಂಬರ್ 26 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ತನಿಖೆ ವೇಳೆ, ಈ ಇಬ್ಬರು ಆರೋಪಿಗಳ ಮೇಲೆ ಈ ಹಿಂದೆ ಹಲವು ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









