ಉಜಿರೆ: ಎಲೆಮರೆಯ ಕಾಯಿಯಂತೆ ಸಾಮಾನ್ಯ ಜನರು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಅಸಾಮಾನ್ಯ ಸೇವೆ-ಸಾಧನೆಯನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಬೆಂಗಳೂರಿನ ಜ್ಞಾನಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ, ಈರಮ್ಮ ನಾಗರಾಜಪ್ಪ ಪ್ರತಿಷ್ಠಾನ, ಮಣ್ಣೆ ಮೋಹನ್ ಪುಸ್ತಕಮಾಲೆ ಮತ್ತು ಪರಿಮಳ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ದಕ್ಷಿಣಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ ರಾಷ್ಟ್ರ ಮಟ್ಟದ ಸಾಹಿತ್ಯ ಸೌರಭ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲರೂ ಕನ್ನಡ ಭಾಷೆಯನ್ನು ಬಳಸಿ, ಉಳಿಸಿ, ಬೆಳೆಸಿದಾಗ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಯೂ ಆಗುತ್ತದೆ. ತುಳುನಾಡಿನಲ್ಲಿ ಕನ್ನಡ ಮಾತೃಭಾಷೆಯಾದರೂ ನಮ್ಮ ಆಡು ಭಾಷೆ ತುಳು ಆಗಿದೆ. ಕರಾವಳಿ ಕರ್ನಾಟಕದಲ್ಲಿ ಯಕ್ಷಗಾನ ಜನಪ್ರಿಯ ಜಾನಪದ ಕಲೆಯಾಗಿದ್ದು ತುಳು ಮತ್ತು ಕನ್ನಡದಲ್ಲಿ ಯಕ್ಷಗಾನ ತಾಳಮದ್ದಳೆ ಹಾಗೂ ಬಯಲಾಟ ಪ್ರದರ್ಶನದ ಮೂಲಕ ಕಲೆ, ಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಭಾವನೆ ಮತ್ತು ಪ್ರಸಾರದೊಂದಿಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರೇರಣೆ, ಮಾರ್ಗದರ್ಶನ ನೀಡಲಾಗುತ್ತದೆ. ಯಕ್ಷಗಾನ ಕಲಾವಿದರು ಕಡಿಮೆ ಶಿಕ್ಷಣ ಪಡೆದವರಾದರೂ ಶುದ್ಧ ಕನ್ನಡಭಾಷೆಯನ್ನು ಬಳಸುತ್ತಾರೆ. ಕೋಟ ಶಿವರಾಮ ಕಾರಂತರು ಯಕ್ಷಗಾನದ ಕಂಪನ್ನು ವಿದೇಶಗಳಲ್ಲಿಯೂ ಪಸರಿಸಿದ್ದಾರೆ. ಧರ್ಮಸ್ಥಳದಲ್ಲಿ ಪ್ರತಿವರ್ಷ ಕಾರ್ತಿಕಮಾಸದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿ ನಾಡಿನ ಹಿರಿಯ ಮಠಾಧಿಪತಿಗಳು, ಸಾಹಿತಿಗಳು ಮತ್ತು ವಿದ್ವಾಂಸರನ್ನು ಆಹ್ವಾನಿಸಿ ವಿಶೇಷ ಉಪನ್ಯಾಸಗಳ ಮೂಲಕ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೂ ಪೋತ್ಸಾಹ ನೀಡಲಾಗುತ್ತದೆ ಎಂದರು.
ಹAಪನಾ, ಶಿವರಾಮ ಕಾರಂತ, ದ.ರಾ. ಬೇಂದ್ರೆ, ಪು.ತಿ.ನ, ಕುವೆಂಪು, ಚನ್ನವೀರಕಣವಿ, ಚಂದ್ರಶೇಖರ ಕಂಬಾರ ಮೊದಲಾದ ಸಾಹಿತಿಗಳು ಧರ್ಮಸ್ಥಳದ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಡಾ. ಎಂ.ಪಿ. ಶ್ರೀನಾಥರ ಸೇವೆ-ಸಾಧನೆಯನ್ನು ಹೆಗ್ಗಡೆಯವರು ಶ್ಲಾಘಿಸಿ ಅಭಿನಂದಿಸಿದರು.
ಜ್ಞಾನಗAಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಸ್ತುತ್ಯಾರ್ಹವಾದ ವಿಶೇಷ ಸೇವೆಯನ್ನು ಹೆಗ್ಗಡೆಯವರು ಶ್ಲಾಘಿಸಿದರು.
ಪ್ರತಿ ಮನೆಯಲ್ಲಿಯೂ ಸಣ್ಣ ಗ್ರಂಥಾಲಯ ಇರಬೇಕು: ಹೇಮಾವತಿ ವೀ. ಹೆಗ್ಗಡೆ
ಸಾಹಿತ್ಯದ ಒಲವು ಕಡಿಮೆಯಾಗುತ್ತಿರುವುದು ವಿಷಾದನೀಯವಾಗಿದೆ. ಪ್ರತಿ ಮನೆಯಲ್ಲಿಯೂ ಸಣ್ಣ ಗ್ರಂಥಾಲಯವನ್ನು ಆರಂಭಿಸಿ ಎಲ್ಲರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಏಳು ಕವನ ಸಂಕಲನ ಮತ್ತು ಇಪ್ಪತ್ತು ಹೊಸ ಕೃತಿಗಳನ್ನು ಲೋಕಾರ್ಪಣೆ ಮಾಡಿದ ಹೇಮಾವತಿ ವೀ. ಹೆಗ್ಗಡೆ ಹೇಳಿದರು.
ಹಿಂದಿನ ಕಾಲದಲ್ಲಿ ಅನಕ್ಷರಸ್ಥರಾದವರು ಕೂಡಾ ಜಾನಪದ ಕಲೆ, ಸಾಹಿತ್ಯ, ಕವನಗಳ ಮೂಲಕ ಅಮೂಲ್ಯ ಸೇವೆ-ಸಾಧನೆ ಮಾಡಿದ್ದಾರೆ. ಮನೆಗಳಲ್ಲಿ, ಮಠ-ಮಂದಿರಗಳಲ್ಲಿ ಪುರಾಣ ವಾಚನ-ಪ್ರವಚನ ಮಾಡುವ ಸಂಪ್ರದಾಯವಿತ್ತು. ಧರ್ಮಸ್ಥಳದಲ್ಲಿ ಪ್ರತಿ ವರ್ಷವೂ ಮಳೆಗಾಲದಲ್ಲಿ ಎರಡು ತಿಂಗಳು ನಿತ್ಯವೂ ಪುರಾಣ ವಾಚನ-ಪ್ರವಚನ ನಡೆಯುತ್ತದೆ.
ಸಾಹಿತ್ಯವು ಮನುಷ್ಯರನ್ನು ಮತ್ತು ಮನಸುಗಳನ್ನು ಸೌಹಾರ್ದಯುತವಾಗಿ ಬೆಸೆಯುವ ಕೊಂಡಿಯಾಗಿದೆ. ಸಾಹಿತ್ಯವು ನಮ್ಮ ಭಾಷೆ, ಧರ್ಮ ಮತ್ತು ಸಂಸ್ಕೃತಿಯ ಬೇರುಗಳಿದ್ದಂತೆ. ಅದನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಆಂಗ್ಲಮಾಧ್ಯಮ ಶಾಲೆಯ ಮಕ್ಕಳು ಕೂಡಾ ಕನ್ನಡ ಸಾಹಿತ್ಯಕೃತಿಗಳು, ಪತ್ರಿಕೆಗಳನ್ನು ಓದುವುದಿಲ್ಲ. ಮನೆಯಲ್ಲಿ ಹಿರಿಯರು ಕೂಡಾ ಕನ್ನಡವನ್ನೇ ಬಳಸಬೇಕು ಎಂದು ಅವರು ಸಲಹೆ ನೀಡಿದರು.
ಕವನ ರಚನೆಯ ಮೂಲಕ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಇಂದು ಮಹಿಳೆಯರು ಕೂಡಾ ಸಾಹಿತ್ಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುತ್ತಿರುವುದು ಸ್ತುತ್ಯಾರ್ಹವಾಗಿದೆ. ಕಥೆ, ಕಾದಂಬರಿ, ಪುರಾಣಗಳನ್ನು ಓದಿದಾಗ ನಮ್ಮ ಜ್ಞಾನಕ್ಷಿತಿಜ ವಿಸ್ತಾರವಾಗುತ್ತದೆ. ತ್ರಿವೇಣಿ, ಅ.ನ.ಕೃ, ಅನುಪಮಾ, ನಿರಂಜನ, ಬೇಂದ್ರೆ, ಪು.ತಿ.ನ. ಕಂಬಾರ ಮೊದಲಾದವರ ಕೃತಿಗಳನ್ನು ಓದಬೇಕು ಎಂದು ಅವರು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜ್ಞಾನಗಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಅಧ್ಯಕ್ಷ ಮಣ್ಣೆ ಮೋಹನ್, ರಾಜ್ಯದ ಮೂವತ್ತೊಂದು ಜಿಲ್ಲೆಗಳಲ್ಲಿಯೂ ಸಾಹಿತ್ಯ ಸೌರಭ ಕಾರ್ಯಕ್ರಮಗಳನ್ನು ಆಯೋಜಿಸಿ ಉದಯೋನ್ಮುಖ ಕಲಾವಿದರು ಮತ್ತು ಸಾಹಿತಿಗಳನ್ನು ಪ್ರೋತ್ಸಾಹಿಸಲಾಗುತ್ತದೆ. ತಮ್ಮ ಸೇವೆಗೆ ಸರ್ವರ ಸಕ್ರಿಯ ಸಹಕಾರವನ್ನು ಅವರು ಕೋರಿದರು.
ಸಾಧಕರ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಉಜಿರೆಯ ಡಾ. ಎಂ.ಪಿ. ಶ್ರೀನಾಥ್, ಬೆಳ್ತಂಗಡಿಯ ಯದುಪತಿ ಗೌಡ, ಧರ್ಮಸ್ಥಳದ ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಮತ್ತು ಸುಬ್ರಹ್ಮಣ್ಯ ಪ್ರಸಾದ, ಪುರಂದರ ಭಟ್, ಲಕ್ಷ್ಮೀ ಬೆಂಗಳೂರು, ಡಾ. ಸರಸ್ವತಿ ಚಂದ್ರಶೇಖರ್, ಚೆನ್ನಪ್ಪ ಗೌಡ, ಪ್ರವೀಣ್ ಅಮ್ಮೆಂಬಳ ಮೊದಲಾದವರನ್ನು ಗೌರವಿಸಿ ಅಭಿನಂದಿಸಲಾಯಿತು.
ಕವಿಗೋಷ್ಠಿ, ಕವನವಾಚನ ಮತ್ತು ನೃತ್ಯ ಪ್ರದರ್ಶನ ನಡೆಯಿತು.
ಬೆಂಗಳೂರಿನ ಪರಿಮಳ ಪ್ರಕಾಶನದ ಅಧ್ಯಕ್ಷರಾದ ಪರಿಮಳ ಸ್ವಾಗತಿಸಿದರು. ಪರಮಾನಂದ ಬಳ್ಳೊಳ್ಳಿ ಧನ್ಯವಾದವಿತ್ತರು.
ಬೆಂಗಳೂರಿನ ತೇಜಸ್ವಿನಿ, ಅನುಪಮಾ ಚಂದ್ರು, ಲಕ್ಕೂರು ನಾಗರಾಜು ಮತ್ತು ಗೀತಾ ವಿ.ಆರ್. ಕಾರ್ಯಕ್ರಮ ನಿರ್ವಹಿಸಿದರು.
ಕೋಟದಲ್ಲಿ “ಸಾಹಿತ್ಯ ಸೌರಭ” ಇಂದು: ಡಾ. ಶಿವರಾಮ ಕಾರಂತರ ಹುಟ್ಟೂರಾದ ಕೋಟದಲ್ಲಿ ಇಂದು ಭಾನುವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಶಿವರಾಮ ಕಾರಂತ ಪ್ರತಿಷ್ಠಾನದ ಸಹಯೋಗದೊಂದಿಗೆ ಸಾಹಿತ್ಯ ಸೌರಭ ಕಾರ್ಯಕ್ರಮ ನಡೆಯುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










