ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ `ಮುಸ್ಲಿಂ’ ನಾಯಕ?

10:43 AM, Wednesday, January 30th, 2013
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯ ಸೂಚನೆಯಂತೆ ಮುಂದಿನ ವಿಧಾನ ಸಭ ಚುನಾವಣೆ ಸಂದರ್ಭ ಅನುಸರಿಸಬೇಕಾದ ಮಾರ್ಗಸೂತ್ರದ ಅನ್ವಯ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಒಂದಷ್ಟು ಬದಲಾವಣೆಯ ಗಾಳಿ ಬೀಸತೊಡಗಿದೆ.

`ಒಬ್ಬ ವ್ಯಕ್ತಿಗೆ ಒಂದು ಹುದ್ದೆ’ ಸೂತ್ರವನ್ನು ಅನುಸರಿಸಿ ಎಂದು ಹೈಕಮಾಂಡ್ ಸ್ಪಷ್ಟ ಸೂಚನೆ ಹೊರಡಿಸಿದರೆ, ಬಂಟ್ವಾಳ ಶಾಸಕರೂ ಆಗಿರುವ ರಮಾನಾಥ ರೈ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ. ಹಾಗಾಗಿ ಸಹಜವಾಗಿ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ಆಯ್ಕೆ ಮಾಡುವುದು ಅನಿವಾರ್ಯವಾಗಿದೆ.

ಮಂಗಳೂರು ಲೋಕಸಭ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ಆಗ್ರಹ ಮುಸ್ಲಿಂ ವಲಯದಿಂದ ಕೇಳಿ ಬಂದಿದೆ. ಈ ಬಗ್ಗೆ ಮುಸ್ಲಿಂ ಸಮಾಜದ ಮುಖಂಡರು ಸಭೆಯನ್ನೂ ನಡೆಸಿದ್ದಾರೆ. ಪ್ರಬಲ ಟಿಕೆಟ್ ಆಕಾಂಕ್ಷಿ ಜನಾರ್ಧನ ಪೂಜಾರಿ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೀಗೆ ಹಕ್ಕು ಪ್ರತಿಪಾದಿಸಲು ಮುಕ್ತ ಸ್ವಾತಂತ್ರವಿದೆ ಎಂದು ಹೇಳಿದ್ದಾರೆ. ಸದ್ಯ ಟಿಕೆಟ್ ದಕ್ಕುವುದು ಅಸಾಧ್ಯದ ಮಾತು ಎಂದು ತಿಳಿದಿದ್ದರೂ ಕೂಡ ಭವಿಷ್ಯದ ದಿನಗಳಲ್ಲಿ ಈ ಬೇಡಿಕೆಗೆ ಬಲ ಸಿಗಬಹುದು ಎಂಬ ಅಭಿಪ್ರಾಯ ಮುಸ್ಲಿಂ ವಲಯದಲ್ಲಿ ವ್ಯಕ್ತವಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಈಗಾಗಲೆ ಕ್ರೈಸ್ತ ಸಮುದಾಯದ ಬ್ಲೇಸಿಯಸ್ ಡಿಸೋಜ, ಬಂಟ ಸಮುದಾಯದ ರಮಾನಾಥ ರೈ ಮತ್ತಿತರರು ಅಲಂಕರಿಸಿದ್ದಾರೆ. ಆದರೆ ಈವರೆಗೆ ಒಬ್ಬ ಮುಸ್ಲಿಂ ನಾಯಕನಿಗೆ ಅಧ್ಯಕ್ಷ ಸ್ಥಾನವನ್ನು ನೀಡಿಲ್ಲ ಎಂಬ ಅಸಮಾಧಾನವೂ ಮುಸ್ಲಿಮರಲ್ಲಿದೆ. ಒಂದು ವೇಳೆ ರಮಾನಾಥ ರೈ ಅಧ್ಯಕ್ಷ ಸ್ಥಾನ ತೊರೆದರೆ ಆ ಸ್ಥಾನಕ್ಕೆ ಮುಸ್ಲಿಂ ಸಮಾಜದ ಕಾಂಗ್ರೆಸ್ಸಿಗರನ್ನು ನೇಮಿಸಬೇಕು ಎಂಬ ಆಗ್ರಹವಿದೆ. ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ದುಡಿಯುವ ಸಾಕಷ್ಟು ಕಾರ್ಯಕರ್ತರು ಮುಸ್ಲಿಂ ಸಮಾಜದಲ್ಲಿದ್ದರೂ ಕೂಡ ಸಮರ್ಥ ನಾಯಕರ ಕೊರತೆಯಿದೆ.

`ಒಬ್ಬ ವ್ಯಕ್ತಿಗೆ ಒಂದು ಹುದ್ದೆ’ ಸೂತ್ರವು ಕಾಂಗ್ರೆಸ್ ನ ಅನೇಕರಿಗೆ ಲಾಭ ಮತ್ತು ನಷ್ಟವನ್ನೂ ತಂದೊಡ್ಡುವ ಸಾಧ್ಯತೆಯಿದೆ. ಅಂದರೆ, 2 ಅವಧಿಯಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ರಮಾನಾಥ ರೈ ಮುಂದಿನ ಬಾರಿಯೂ ಸ್ಪರ್ಧಿಸುವ ತವಕದಲ್ಲಿದ್ದಾರೆ. ಅಷ್ಟೇ ಅಲ್ಲ, 6ನೆ ಬಾರಿ ಶಾಸಕರಾಗಿ ಆಯ್ಕೆಯಾಗುವ ವಿಶ್ವಾಸವೂ ಅವರಲ್ಲಿದೆ. ಹಾಗಾಗಿ ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಮುಕ್ತ ಮನಸ್ಸು ಹೊಂದಿದ್ದಾರೆ. ಬಂಟ್ವಾಳ, ಮಂಗಳೂರು ಮಾತ್ರವಲ್ಲದೆ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲೂ ಕೂಡ ರೈ ತನ್ನದೇ ಆದ ವರ್ಛಸ್ಸು ಹೊಂದಿದ್ದು, ಅಧ್ಯಕ್ಷ ಸ್ಥಾನ ತ್ಯಜಿಸಿದರೆ ಅದರಿಂದಾಗುವ ಪರಿಣಾಮದ ಬಗ್ಗೆಯೂ ಪಕ್ಷದಲ್ಲಿ ಚರ್ಚೆ ಶುರುವಾಗಿದೆ.

ಇನ್ನುಳಿದಂತೆ ಮೀಸಲು ಕ್ಷೇತ್ರವಾದ ಸುಳ್ಯದಲ್ಲಿ ಅಭ್ಯರ್ಥಿಗಳ ಕೊರತೆ ಪಕ್ಷಕ್ಕೆ ಕಾಡುವ ಸಾಧ್ಯತೆಯಿದೆ. ಅಲ್ಲಿ ಡಾ. ರಘು ಎರಡು ಬಾರಿ ಸೋತಿದ್ದರೂ ಕೂಡ ಈ ಬಾರಿ ಗೆಲ್ಲುವ ಅವಕಾಶ ನಿಚ್ಛಳವಾಗಿದೆ. ಆದರೆ, ರಾಹುಲ್ ಗಾಂಧಿಯ ಸೂತ್ರ ರಘುಗೆ ಸ್ಪರ್ಧಿಸಲು ಸಮಸ್ಯೆಯಾಗಲಿದೆ.

ಪುತ್ತೂರು ಕ್ಷೇತ್ರದಲ್ಲಿ ಬಂಟ ಸಮುದಾಯದ ಅಭ್ಯರ್ಥಿಯನ್ನು ನಿಲ್ಲಿಸಿದರೆ ಮಾತ್ರ ಕಾಂಗ್ರೆಸ್ ಅಲ್ಲಿ ಮತ್ತೆ ಖಾತೆ ತೆರೆಯಬಹುದು. ಕಳೆದ ಬಾರಿ ಅಲ್ಪ ಅಂತರದಲ್ಲಿ ಸೋತಿದ್ದ ಬೊಂಡಾಲ ಜಗನ್ನಾಥ ಶೆಟ್ಟಿ ಇಹಲೋಕ ತ್ಯಜಿಸಿದ್ದಾರೆ. ಎರಡು ಬಾರಿ ಸೋತಿರುವ ಸುಧಾಕರ ಶೆಟ್ಟಿಗೆ ಮತ್ತೆ ಟಿಕೆಟ್ ಅಸಂಭವ. ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸ್ಪರ್ಧಿಸಿ ದರೆ ಮಾಜಿ ಸಂಸದ ವಿನಯ ಕುಮಾರ್ ಸೊರಕೆಯನ್ನು ಕಾಂಗ್ರೆಸ್ ಕಣಕ್ಕಿಳಿಸುವ ಅನಿವಾರ್ಯತೆಯಿದೆ. ಆದರೆ, ಅವರ ಚಿತ್ತ ಮಂಗಳೂರು ಲೋಕಸಭ ಕ್ಷೇತ್ರದ ಮೇಲಿದೆ.

ಒಟ್ಟಿನಲ್ಲಿ ಹೊಸ ವರ್ಷದಲ್ಲಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಹೊಸ ಹೊಸ ಚಿಂತನ, ಮಂಥನ, ಬದಲಾವಣೆಯ ಪರ್ವ ಶುರುವಾಗಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English