ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಿನಿಂದ ಶಾಂತಿಯುತ ವಾತಾವರಣ ನೆಲೆಸಿದೆ. ಕೋಮು ಗಲಭೆಗಳಿಲ್ಲದೆ, ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿದ್ದರೂ, ದಕ್ಷ ಅಧಿಕಾರಿಗಳಾದ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ಎಸ್ಪಿ ಡಾ. ಅರುಣ್ ಅವರನ್ನು ವರ್ಗಾವಣೆ ಮಾಡಲು ತೆರೆಮರೆಯ ಸಂಚು ನಡೆಯುತ್ತಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
ಅಕ್ರಮ ದಂಧೆಕೋರರ ನಿದ್ದೆಗೆಡಿಸಿದ ಅಧಿಕಾರಿಗಳು ಜಿಲ್ಲೆಯಲ್ಲಿ ಬೇರೂರಿದ್ದ ಮರಳು ದಂಧೆ, ಕೆಂಪು ಕಲ್ಲು ಸಾಗಣೆ, ಮಟ್ಕಾ, ಜೂಜಾಟ ಹಾಗೂ ಬೆಟ್ಟಿಂಗ್ ಸಿಂಡಿಕೇಟ್ಗಳ ಎಡೆಮುರಿ ಕಟ್ಟುವಲ್ಲಿ ಈ ಇಬ್ಬರು ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅಕ್ರಮವನ್ನೇ ಉದ್ಯೋಗವಾಗಿಸಿಕೊಂಡಿದ್ದ ಮಾಫಿಯಾಗಳಿಗೆ ಈ ದಕ್ಷತೆ ನುಂಗಲಾರದ ತುತ್ತಾಗಿದೆ. ಈ ದಂಧೆಗಳ ಮೂಲಕ ಲಾಭ ಪಡೆಯುತ್ತಿದ್ದ ಕೆಲವು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಉದ್ಯಮಿಗಳು ಈಗ ಅಧಿಕಾರಿಗಳನ್ನು ಎತ್ತಂಗಡಿ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಧರ್ಮ ಮತ್ತು ಆಚರಣೆಯ ಹೆಸರಲ್ಲಿ ಟಾರ್ಗೆಟ್ ಕೇವಲ ಆಡಳಿತಾತ್ಮಕವಾಗಿ ಮಾತ್ರವಲ್ಲದೆ, ಧಾರ್ಮಿಕ ಭಾವನೆಗಳ ಹೆಸರಿನಲ್ಲೂ ಅಧಿಕಾರಿಗಳನ್ನು ಗುರಿ ಮಾಡಲಾಗುತ್ತಿದೆ. ಶ್ರೀಕೃಷ್ಣಾಷ್ಟಮಿ ಮತ್ತು ಗಣೇಶೋತ್ಸವದ ಸಂದರ್ಭದಲ್ಲಿ ಧ್ವನಿವರ್ಧಕ ನಿಯಮಗಳನ್ನು ಜಾರಿಗೊಳಿಸಿದ್ದಕ್ಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹರಡಿಸಲಾಗಿತ್ತು. ಈಗ ಸಂಪ್ರದಾಯ ಮತ್ತು ಆಚರಣೆಗಳ ನೆಪವೊಡ್ಡಿ ಇವರನ್ನು ವರ್ಗಾವಣೆಗೊಳಿಸಲು “ಪೊಲಿಟಿಕಲ್ ಗೇಮ್” ಶುರುವಾಗಿದೆ. ಇದಕ್ಕೆ ಆಡಳಿತಾರೂಢ ಕಾಂಗ್ರೆಸ್ನ ಕೆಲವು ನಾಯಕರು ಸಾಥ್ ನೀಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ವರ್ಗಾವಣೆ ಪಟ್ಟಿಯಲ್ಲಿಲ್ಲದ ಹೆಸರು: ಮಾಫಿಯಾಗಳಿಗೆ ನಿರಾಸೆ ಸಾಮಾನ್ಯವಾಗಿ ಡಿಸೆಂಬರ್ ತಿಂಗಳ ವರ್ಗಾವಣೆ ಪಟ್ಟಿಯಲ್ಲಿ ಈ ಅಧಿಕಾರಿಗಳ ಹೆಸರು ಇರಬಹುದೆಂದು ಮಾಫಿಯಾ ಕುಳಗಳು ಕಾದು ಕುಳಿತಿದ್ದವು. ಆದರೆ, ಇತ್ತೀಚಿನ ಪಟ್ಟಿಯಲ್ಲಿ ಇವರ ಹೆಸರು ಇಲ್ಲದಿರುವುದು ದಂಧೆಕೋರರಿಗೆ ನಿರಾಸೆ ಮೂಡಿಸಿದೆ. ಸುಧೀರ್ ಕುಮಾರ್ ರೆಡ್ಡಿ ಅವರಿಗೆ 2028ರಲ್ಲಿ ಪದೋನ್ನತಿ ಬಾಕಿ ಇರುವುದರಿಂದ ಸದ್ಯಕ್ಕೆ ಅವರನ್ನು ಬದಲಾಯಿಸುವುದು ಅನುಮಾನ ಎನ್ನಲಾಗುತ್ತಿದೆ.
ಹಿರಿಯ ನಾಯಕರ ಬೆಂಬಲ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಬೆಂಗಳೂರಿನ ಪ್ರಭಾವಿ ನಾಯಕರು ಸದ್ಯಕ್ಕೆ ಈ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಒಪ್ಪುತ್ತಿಲ್ಲ. ಪಶ್ಚಿಮ ವಲಯದ ಐಜಿಪಿ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಸುಸ್ಥಿತಿಯಲ್ಲಿರುವುದರಿಂದ, ಯಾವುದೇ ಬದಲಾವಣೆ ಮಾಡದಂತೆ ಮುಖ್ಯಮಂತ್ರಿಗಳು ಹಾಗೂ ಡಿಜಿಪಿಯವರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









