ಮಂಗಳೂರು : ಬೆಂಗಳೂರಿನ ಲಾರಿಪಾಳ್ಯದಲ್ಲಿ ನಡೆದ ಗೋ ರಕ್ಷಣೆಯ ಸಂದರ್ಭದಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ರಾಷ್ಟ್ರ ರಕ್ಷಣಾ ಪಡೆಯ ಸಂಚಾಲಕ ಪುನೀತ್ ಕೆರೆಹಳ್ಳಿ ಅವರು ಮಂಗಳೂರಿನ ಉರ್ವ ಪೊಲೀಸ್ ಠಾಣೆಗೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದಾರೆ. ಇದೇ ವೇಳೆ ಮಂಗಳೂರಿನಲ್ಲಿ ಇತ್ತೀಚೆಗೆ 19 ಮಂದಿ ಅಕ್ರಮ ಬಾಂಗ್ಲಾದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿರುವ ವಿಷಯದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಂಗಳೂರು ಪೊಲೀಸರಿಗೆ ಕಠಿಣ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಅಕ್ರಮ ಬಾಂಗ್ಲಾದೇಶಿಗಳ ವಿರುದ್ಧ ಇಲಾಖೆಯು ಸರಿಯಾದ ಕ್ರಮ ಹಾಗೂ ತೀವ್ರವಾದ ಕಾರ್ಯಾಚರಣೆ ನಡೆಸದಿದ್ದಲ್ಲಿ, ಬೆಂಗಳೂರಿನ ಮಾದರಿಯಲ್ಲೇ ನಾವೇ ಮಂಗಳೂರಿಗೆ ಬಂದು ಸ್ವಯಂ ಕಾರ್ಯಾಚರಣೆ ನಡೆಸಲಿದ್ದೇವೆ ಎಂದು ಎಚ್ಚರಿಸಿದ್ದಾರೆ.
ಅಕ್ರಮವಾಗಿ ದೇಶ ನುಸುಳಿರುವ ಬಾಂಗ್ಲಾದೇಶಿ ನಿವಾಸಿಗಳಿಗೆ ಕರ್ನಾಟಕವು ತಾಣವಾಗುತ್ತಿರುವುದರ ಬಗ್ಗೆ ಪ್ರಶ್ನಿಸಿದ ಅವರು, ಕರಾವಳಿಯಲ್ಲಿ ಕೇವಲ ಹೆಸರಿಗಷ್ಟೇ ಇಬ್ಬರು ಮೂವರನ್ನು ವಶಕ್ಕೆ ಪಡೆಯುವುದಲ್ಲ, ಮಂಗಳೂರಿನ ಪ್ರಮುಖ ಶಾಪಿಂಗ್ ಮಾಲ್ಗಳಲ್ಲಿ ಎಷ್ಟು ಸಂಖ್ಯೆಯಲ್ಲಿ ಇಂತಹ ನುಸುಳುಕೋರರು ಕೆಲಸ ಮಾಡುತ್ತಿದ್ದಾರೆ ಎಂಬ ನಿಖರವಾದ ಪಟ್ಟಿಯನ್ನು ನಾವೇ ಒದಗಿಸಲು ಸಿದ್ಧರಿದ್ದೇವೆ ಎಂದಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ನೇರ ಸವಾಲು ಹಾಕಿದ ಕೆರೆಹಳ್ಳಿ, ನಮಗೆ ಮುಕ್ತ ಅವಕಾಶ ನೀಡಿದರೆ ನಾವೇ ಅವರನ್ನು ಹಿಡಿದು ಕೊಡುತ್ತೇವೆ. ನಮ್ಮೊಂದಿಗೆ ಕೈಜೋಡಿಸಿ ಕಾರ್ಯಾಚರಣೆ ನಡೆಸಿ, ಇವರಿಗೆ ಯಾವ ಮುಸ್ಲಿಂ ನಾಯಕರು ಆಶ್ರಯ ಮತ್ತು ಬೆಂಬಲ ನೀಡುತ್ತಿದ್ದಾರೆ ಎಂಬ ರಹಸ್ಯ ಮಾಹಿತಿಯನ್ನೂ ನಾವು ತನಿಖಾಧಿಕಾರಿಗಳಿಗೆ ನೀಡಲಿದ್ದೇವೆ ಎಂದು ಹೇಳಿದರು.
ರಾಜ್ಯದ ಗುಪ್ತಚರ ಇಲಾಖೆಯ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡ ಅವರು, ರೈಲ್ವೆ ನಿಲ್ದಾಣಗಳಲ್ಲಿ ಇಳಿಯುವ ಸಂಶಯಾಸ್ಪದ ವ್ಯಕ್ತಿಗಳನ್ನು ಏಕೆ ಸೂಕ್ತವಾಗಿ ತಪಾಸಣೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು. ಇದು ದೇಶದ ಆಂತರಿಕ ಭದ್ರತೆಗೆ ಎದುರಾಗಿರುವ ಅತಿ ದೊಡ್ಡ ಕಂಟಕವಾಗಿದ್ದು, ನಮ್ಮ ಸಂಘಟನೆ ಇದರ ವಿರುದ್ಧ ನಿರಂತರ ಸಮರ ಸಾರಿದೆ. ದೇಶಕ್ಕೆ ಅಕ್ರಮವಾಗಿ ಬಂದಿರುವ ಈ ವಿದೇಶಿ ಪ್ರಜೆಗಳಿಗೆ ಕರ್ನಾಟಕದಲ್ಲಿ ಅತ್ಯಂತ ಸುಲಭವಾಗಿ ಆಧಾರ್ ಕಾರ್ಡ್ ಹಾಗೂ ಪಾಸ್ಪೋರ್ಟ್ಗಳು ದೊರೆಯುತ್ತಿವೆ. ರಾಜ್ಯದ ಪ್ರಮುಖ ಮಹಾನಗರಗಳಲ್ಲೇ ಇಂದು ಲಕ್ಷಾಂತರ ಬಾಂಗ್ಲಾದೇಶಿ ನುಸುಳುಕೋರರು ನೆಲೆಸಿದ್ದು, ಇದಕ್ಕೆ ಪೂರಕವಾದ ಹಲವು ದಾಖಲೆಗಳ ಸಮೇತ ನಾವೇ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.
ಉತ್ತರ ಭಾರತದ ರಾಜ್ಯಗಳಲ್ಲಿ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವುದರಿಂದ ತೊಂದರೆ ಅನುಭವಿಸುತ್ತಿರುವ ಈ ನುಸುಳುಕೋರರಿಗೆ ಕರ್ನಾಟಕವು ಇಷ್ಟೊಂದು ಸುರಕ್ಷಿತ ತಾಣವಾಗಿ ಮಾರ್ಪಡಲು ಕಾರಣವೇನು ಹಾಗೂ ಇಲ್ಲಿ ಇವರಿಗೆ ಯಾರು ರಕ್ಷಣೆ ನೀಡುತ್ತಿದ್ದಾರೆ ಎಂದು ಕೇಳಿದ ಅವರು, ಸ್ಥಳೀಯ ಮುಸ್ಲಿಂ ಮುಖಂಡರು ಇವರನ್ನು ತಮಗೆ ಬೇಕಾದ ಕೆಳಹಂತದ ಕೆಲಸಗಳಿಗೆ ನಿಯೋಜಿಸಿಕೊಂಡು ಆಶ್ರಯ ಒದಗಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ರಾಜ್ಯದ ಗೃಹ ಇಲಾಖೆ ಹಾಗೂ ಆಂತರಿಕ ಭದ್ರತಾ ವಿಭಾಗವು ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಗೃಹ ಸಚಿವರು ಕೇವಲ ಆರ್ಎಸ್ಎಸ್ ಹಾಗೂ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕಲು ಮತ್ತು ಅವರ ಹಿಂದೆ ಬಿದ್ದಿರಲು ಮಾತ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










