ಉಡುಪಿ : ಅಷ್ಟಮಠಗಳಲ್ಲೊಂದಾದ ಶಿರೂರು ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಹರಡುವ ಪೋಸ್ಟ್ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ತಾಲೂಕಿನ ನಿಟ್ಟೆ ಅಂಬಡೆಕಲ್ಲು ನಿವಾಸಿ ಸುಧಾಕರ (37) ಬಂಧಿತ ವ್ಯಕ್ತಿ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಬಾರಿಯ ಪರ್ಯಾಯ ಮಹೋತ್ಸವಕ್ಕೆ ಹೊರೆಕಾಣಿಕೆ ಅರ್ಪಿಸುವ ಉದ್ದೇಶದಿಂದ ‘ಉಡುಪಿ ಜಿಲ್ಲಾ ಮುಸ್ಲಿಮ್ ಸೌಹಾರ್ದ ಪರ್ಯಾಯ ಸಮಿತಿ’ಯನ್ನು ರಚಿಸಲಾಗಿತ್ತು. ಈ ಸಮಿತಿಯ ಕುರಿತು ಹಾಗೂ ನಿರ್ದಿಷ್ಟ ಧರ್ಮ ಮತ್ತು ಜನಾಂಗಗಳ ನಡುವೆ ದ್ವೇಷ ಉತ್ತೇಜಿಸುವ ರೀತಿಯಲ್ಲಿ ಆಕ್ಷೇಪಾರ್ಹ ಬರಹಗಳನ್ನು ಸುಧಾಕರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಎನ್ನಲಾಗಿದೆ. ಸಾರ್ವಜನಿಕ ಸಾಮರಸ್ಯಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಈತನ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಟ್ಟೆ ಮೂಲದ ಮತ್ತೊಬ್ಬ ಆರೋಪಿ ಸುದೀಪ್ ಶೆಟ್ಟಿ ಎಂಬಾತ ಸದ್ಯ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆತನಿಗಾಗಿ ತೀವ್ರ ಶೋಧ ನಡೆಸುತ್ತಿದ್ದು, ಸಮಾಜದಲ್ಲಿ ಶಾಂತಿ ಕದಡುವ ಇಂತಹ ಪ್ರಯತ್ನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









