ಮಂಗಳೂರು : ಮಂಗಳೂರಿನ ಹೆಮ್ಮೆಯ ಸಂಕೇತವಾದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯನ್ನು ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಲು ಸರ್ಕಾರ ಮುಂದಾಗಿದೆ. 2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಒಟ್ಟು 70 ಕೋಟಿ ರೂಪಾಯಿಗಳ ಬೃಹತ್ ಅನುದಾನವನ್ನು ಈ ಯೋಜನೆಗೆ ಮೀಸಲಿಡಲಾಗಿದ್ದು, ಮೊದಲ ಹಂತದಲ್ಲಿ 35 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಹೊರರೋಗಿ ವಿಭಾಗದ (OPD Block) ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಯೋಜನೆಯ ಮೂಲಕ ಕರಾವಳಿ ಭಾಗದ ಜನರಿಗೆ ಒಂದೇ ಸೂರಿನಡಿ ಎಲ್ಲಾ ಸುಸಜ್ಜಿತ ವೈದ್ಯಕೀಯ ಸೇವೆಗಳನ್ನು ಒದಗಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಆಸ್ಪತ್ರೆಯ ಮೂಲಸೌಕರ್ಯಗಳ ವೃದ್ಧಿಯ ಜೊತೆಗೆ ರೋಗಿಗಳ ಆರೋಗ್ಯ ರಕ್ಷಣೆಗೆ ಪೂರಕವಾಗಿ ಪೌಷ್ಟಿಕ ಆಹಾರ ಪೂರೈಕೆಗೂ ವಿಶೇಷ ಒತ್ತು ನೀಡಲಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಇಸ್ಕಾನ್ ಸಂಸ್ಥೆಯ ಮೂಲಕ ಸಮತೋಲಿತ ಹಾಗೂ ಗುಣಮಟ್ಟದ ಆಹಾರವನ್ನು ಒದಗಿಸಲು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಈ ಎಲ್ಲ ಕಾಮಗಾರಿಗಳನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವರ ನೇತೃತ್ವದಲ್ಲಿ ಸಾಕಾರಗೊಳ್ಳುತ್ತಿರುವ ಈ ಯೋಜನೆಗೆ ಈಗಾಗಲೇ ಸಚಿವ ಸಂಪುಟದ ಒಪ್ಪಿಗೆ ದೊರೆತಿದೆ. ಮುಂದಿನ ದಿನಗಳಲ್ಲಿ ವೆನ್ಲಾಕ್ ಆಸ್ಪತ್ರೆಯು ಹೈಟೆಕ್ ಸ್ಪರ್ಶದೊಂದಿಗೆ ಕರಾವಳಿಯ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ. ಬಡ ಮತ್ತು ಸಾಮಾನ್ಯ ವರ್ಗದ ಜನರಿಗೆ ಉತ್ತಮ ದರ್ಜೆಯ ಚಿಕಿತ್ಸೆ ಲಭ್ಯವಾಗುವಂತೆ ಮಾಡುವ ಮೂಲಕ ಸರ್ಕಾರವು ಜನಸಾಮಾನ್ಯರ ಆರೋಗ್ಯದ ಬದ್ಧತೆಯನ್ನು ಎತ್ತಿ ಹಿಡಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









