ಮಂಗಳೂರು: ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಪ್ರಯಾಣಿಕರ ಬ್ಯಾಗ್ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲೆ ಕಳ್ಳನನ್ನು ಬರ್ಕೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಮಡಿಕೇರಿ ಮೂಲದ ಮಹಮ್ಮದ್ ಇಮ್ರಾನ್ ಎನ್.ಎಮ್ (44) ಬಂಧಿತ ಆರೋಪಿಯಾಗಿದ್ದು, ಈತನಿಂದ ಸುಮಾರು 6,47,920 ರೂಪಾಯಿ ಮೌಲ್ಯದ 46.28 ಗ್ರಾಂ ಚಿನ್ನಾಭರಣ ಹಾಗೂ 5,000 ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಜನವರಿ 23ರಂದು ಬಿಜೈ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ಪ್ರಯಾಣಿಸಲು ಸಿದ್ಧರಿದ್ದ ಹಿರಿಯ ನಾಗರಿಕರ ಬ್ಯಾಗ್ ಕಳುವಾದ ಬಗ್ಗೆ ದಾಖಲಾಗಿದ್ದ ದೂರಿನ ಅನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿ ರೈಲ್ವೇ ನಿಲ್ದಾಣದ ಬಳಿ ಆರೋಪಿಯನ್ನು ಸೆರೆಹಿಡಿದಿದ್ದಾರೆ.
ಬಂಧಿತ ಆರೋಪಿಯು ಕೇವಲ ಮಂಗಳೂರು ಮಾತ್ರವಲ್ಲದೆ ಹಾಸನ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳ ಬಸ್ ನಿಲ್ದಾಣಗಳಲ್ಲಿ ಬ್ಯಾಗ್ ಕಳ್ಳತನ ಮಾಡುವ ರೂಢಿಗತ ಅಪರಾಧಿಯಾಗಿದ್ದಾನೆ. ಈತನ ಮೇಲೆ ಮೈಸೂರಿನ ದೇವರಾಜ ನಗರ, ಹಾಸನ ನಗರ, ಬಡಾವಣೆ, ಚೆನ್ನರಾಯಪಟ್ಟಣ ಹಾಗೂ ದುದ್ದ ಪೊಲೀಸ್ ಠಾಣೆಗಳಲ್ಲಿ ಒಟ್ಟು 11 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬ್ಯಾಗ್ ಕಳ್ಳತನ ಮಾತ್ರವಲ್ಲದೆ ಮನೆಗಳ್ಳತನದ ಪ್ರಕರಣಗಳೂ ಸೇರಿವೆ. ಹಳೆಯ ಪ್ರಕರಣವೊಂದರಲ್ಲಿ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ಈತನ ವಿರುದ್ಧ ನ್ಯಾಯಾಲಯವು ವಾರೆಂಟ್ ಕೂಡ ಹೊರಡಿಸಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಬರ್ಕೆ ಠಾಣೆಯ ಪಿ.ಎಸ್.ಐ ವಿನಾಯಕ ತೊರಗಲ್ ಹಾಗೂ ಸಿಬ್ಬಂದಿಗಳಾದ ಸುಜನ್, ವಾಸುದೇವ, ರವಿ ಲಮಾಣಿ ಸೇರಿದಂತೆ ವಿಶೇಷ ತಂಡವು ಈ ಕಾರ್ಯಾಚರಣೆಯನ್ನು ನಡೆಸಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಾರ್ವಜನಿಕರು ಬಸ್ ನಿಲ್ದಾಣಗಳಲ್ಲಿ ತಮ್ಮ ಸೊತ್ತುಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವಂತೆ ಈ ಮೂಲಕ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









