ಮಂಗಳೂರು : ಪುತ್ತೂರಿನ ಯುವತಿಗೆ ನಡೆದಿದೆ ಎನ್ನಲಾದ ವಂಚನೆ ಪ್ರಕರಣವು ಈಗ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಸಂತ್ರಸ್ತೆಯ ಪರವಾಗಿ ದನಿಯೆತ್ತಿರುವ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ಆರೋಪಿ ಕೃಷ್ಣ ಜೆ. ರಾವ್ ಮತ್ತು ಹಿಂದೂ ಸಂಘಟನೆಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ಅಮಾನವೀಯ ಷರತ್ತುಗಳು ಮತ್ತು ಪ್ರತಿಭಾ ಕುಳಾಯಿ ಸವಾಲು
ಮದುವೆ ವಿಚಾರದ ಸಂಧಾನದ ವೇಳೆ ಆರೋಪಿಯ ಪೋಷಕರು ಅತ್ಯಂತ ಅಮಾನವೀಯ ಷರತ್ತುಗಳನ್ನು ವಿಧಿಸಿದ್ದಾರೆ ಎಂದು ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮಗುವನ್ನು ಸಾಂತ್ವನ ಕೇಂದ್ರಕ್ಕೆ ಸೇರಿಸಬೇಕು, ಆಗ ಮಾತ್ರ ವಿವಾಹವಾಗಿ ಬಳಿಕ ವಿಚ್ಛೇದನ ನೀಡಲಾಗುವುದು ಮತ್ತು 50 ಲಕ್ಷ ರೂ. ಪರಿಹಾರ ನೀಡಲಾಗುವುದು” ಎಂಬ ಷರತ್ತಿಗೆ ಪ್ರತಿಭಾ ಕಿಡಿಕಾರಿದ್ದಾರೆ. “ನಮಗೆ ನಿಮ್ಮ ಹಣ ಬೇಡ, ಸಾಮಾಜಿಕ ನ್ಯಾಯ ಬೇಕು. ಒಂದು ವೇಳೆ ಆರೋಪಿಯು ಪೂಜಾಳನ್ನು ವಿವಾಹವಾಗಿ ಆಕೆಯ ಮನೆಯಲ್ಲೇ ‘ಮನೆ ಅಳಿಯ’ನಾಗಿ ಉಳಿಯುವುದಾದರೆ, ಆತನಿಗೆ ನಾನೇ 50 ಲಕ್ಷ ರೂಪಾಯಿ ನೀಡುತ್ತೇನೆ” ಎಂದು ಅವರು ಬಹಿರಂಗ ಸವಾಲು ಹಾಕಿದ್ದಾರೆ.
ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ವಾಗ್ದಾಳಿ
ಇದೇ ಸಂದರ್ಭದಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಹರಿಹಾಯ್ದ ಕುಳಾಯಿ, “ಹೆಚ್ಚು ಮಕ್ಕಳನ್ನು ಮಾಡಿ ಎಂದು ಭಾಷಣ ಮಾಡುವ ಭಟ್ ಅವರು, ತಮ್ಮದೇ ಶಿಷ್ಯನಿಂದ ಒಬ್ಬ ಯುವತಿಗೆ ಅನ್ಯಾಯವಾದಾಗ ಎಲ್ಲಿ ಹೋಗಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ. ಅನ್ಯಾಯಕ್ಕೊಳಗಾದ ಯುವತಿಗೆ ನ್ಯಾಯ ಕೊಡಿಸಲು ಸಾಧ್ಯವಾಗದಿದ್ದರೆ ನೀವು ಯಾವ ಸೀಮೆಯ ಹಿಂದೂ ನಾಯಕ ಎಂದು ಅವರು ಪ್ರಶ್ನಿಸಿದ್ದಾರೆ. “ಹಿಂದೂ ಯುವಕರನ್ನು ಕೇವಲ ಜೈಲಿಗೆ ಕಳುಹಿಸಲು ಮಾತ್ರ ಬಳಸಿಕೊಳ್ಳುವ ನೀವು, ಈ ಪ್ರಕರಣದಲ್ಲಿ ನಿಮ್ಮ ಯೋಗ್ಯತೆಯನ್ನು ಸಾಬೀತುಪಡಿಸಿ ಮದುವೆ ಮಾಡಿಸಲಿ” ಎಂದು ಗುಡುಗಿದ್ದಾರೆ.
ಪೊಲೀಸ್ ಇಲಾಖೆಯ ಬಗ್ಗೆ ಮೆಚ್ಚುಗೆ
ಮಂಗಳೂರಿನ ಹೊಸ ಪೊಲೀಸ್ ಆಯುಕ್ತರ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, “ಈಗ ಬಂದಿರುವ ಆಯುಕ್ತರು ತಪ್ಪು ಮಾಡಿದ ನಾಯಕರನ್ನೂ ಜೈಲಿಗೆ ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರಭಾಕರ ಭಟ್ ಅವರು ಈಗ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಪರಸ್ಪರ ಬಳಸಿಕೊಳ್ಳುವ ನಾಯಕರು, ಸಾಮಾನ್ಯ ಯುವತಿಯೊಬ್ಬಳಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ದೂರಿದ್ದಾರೆ.
ಪ್ರತಿಭಾ ಕುಳಾಯಿ ಪತ್ರಿಕಾಗೋಷ್ಠಿ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









