ಮಂಗಳೂರು : ನಗರದಲ್ಲಿ ರಾತ್ರಿ ವೇಳೆ ನಿಯಮಾವಳಿಗಳನ್ನು ಗಾಳಿಗೆ ತೂರಿ ಹೋಟೆಲ್ಗಳನ್ನು ನಡೆಸಲಾಗುತ್ತಿದ್ದು, ಇದರ ಹಿಂದೆ ಕೆಳಮಟ್ಟದ ಅಧಿಕಾರಿಗಳ ‘ಹಪ್ತಾ’ ವಸೂಲಿ ಜಾಲ ಅಡಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಗಂಭೀರವಾಗಿ ದೂಷಿಸಿದ್ದಾರೆ. ಸದ್ಯದ ನಿಯಮಗಳ ಪ್ರಕಾರ ಸಾಮಾನ್ಯ ಹೋಟೆಲ್ಗಳಿಗೆ ರಾತ್ರಿ 11:30 ರವರೆಗೆ ಹಾಗೂ ಪ್ರವಾಸೋದ್ಯಮ ಪರವಾನಗಿ ಇರುವ ಸಂಸ್ಥೆಗಳಿಗೆ ಮಧ್ಯರಾತ್ರಿ 12 ಗಂಟೆಯವರೆಗೆ ಮಾತ್ರ ವ್ಯವಹಾರ ನಡೆಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ನಗರದ ಹಲವು ಹೋಟೆಲ್ಗಳು ಈ ಎಲ್ಲಾ ನಿಯಮಗಳನ್ನು ಮುರಿದು ಮುಂಜಾನೆ 3 ಗಂಟೆಯವರೆಗೂ ರಾಜಾರೋಷವಾಗಿ ವ್ಯಾಪಾರ ನಡೆಸುತ್ತಿವೆ ಎಂದು ಅವರು ಬಹಿರಂಗಪಡಿಸಿದ್ದಾರೆ. ತಾವು ಕಳೆದ ಐದು ದಿನಗಳಿಂದ ನಗರದಾದ್ಯಂತ ಖುದ್ದಾಗಿ ರಾತ್ರಿ ವೇಳೆ ಪರಿಶೀಲನೆ ನಡೆಸಿದ್ದು, ಈ ವೇಳೆ ನಿಯಮ ಉಲ್ಲಂಘಿಸಿ ಗ್ರಾಹಕರಿಗೆ ಸೇವೆ ನೀಡುತ್ತಿರುವುದು ಸಾಬೀತಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಶೇಷವಾಗಿ ನಗರದ ಹೆಸರಾಂತ ‘ಎಂಪೈರ್’ ಹೋಟೆಲ್ ವಿರುದ್ಧ ಅವರು ನೇರ ಆರೋಪ ಮಾಡಿದ್ದಾರೆ. ಈ ಹೋಟೆಲ್ನ ಬೇಸ್ಮೆಂಟ್ (ನೆಲಮಾಳಿಗೆ) ಪ್ರದೇಶದಲ್ಲಿ ಕಾನೂನುಬಾಹಿರವಾಗಿ ತಡರಾತ್ರಿ ವ್ಯಾಪಾರ ನಡೆಸಲಾಗುತ್ತಿದೆ. ಪೊಲೀಸರ ವಾಹನಗಳು ಗಸ್ತಿಗೆ ಬರುತ್ತಿದ್ದಂತೆ ಹೋಟೆಲ್ನ ಮುಂಭಾಗದ ಪ್ರಮುಖ ಬಾಗಿಲನ್ನು ಮುಚ್ಚಿ, ಪಾರ್ಕಿಂಗ್ ಜಾಗದ ಹಿಂಬಾಗಿಲಿನ ಮೂಲಕ ಗ್ರಾಹಕರಿಗೆ ರಹಸ್ಯವಾಗಿ ಊಟದ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಇತ್ತೀಚೆಗೆ ತಾವೇ ಖುದ್ದಾಗಿ ಪೊಲೀಸರನ್ನು ಹೋಟೆಲ್ ಒಳಗಡೆ ಕಳುಹಿಸಿದಾಗ ಅಲ್ಲಿದ್ದ ಜನರೆಲ್ಲಾ ದಿಕ್ಕಾಪಾಲಾಗಿ ಓಡಿಹೋಗಿದ್ದಾರೆ ಎಂದು ಅವರು ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಕೆಲವು ಸಂದರ್ಭಗಳಲ್ಲಿ ಹೋಟೆಲ್ನಲ್ಲಿ ಮದ್ಯದ ಅಮಲಿನಲ್ಲಿದ್ದ ಗ್ರಾಹಕರು ಕರ್ತವ್ಯ ನಿರತ ಪೊಲೀಸರ ಜೊತೆಯೇ ವಾಗ್ವಾದಕ್ಕೆ ಇಳಿದ ಉದಾಹರಣೆಗಳೂ ಇವೆ. ಕೆಳಮಟ್ಟದ ಅಧಿಕಾರಿಗಳು ಇಂತಹ ಹೋಟೆಲ್ ಮಾಲೀಕರಿಂದ ನಿಯಮಿತವಾಗಿ ಲಂಚ ಅಥವಾ ಹಪ್ತಾ ಪಡೆಯುತ್ತಿರುವುದೇ ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರಲು ಅಸಲಿ ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ ಎಂದು ಪ್ರಸನ್ನ ರವಿ ಅವರು ಆಡಳಿತ ವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









