ಮಂಗಳೂರು : ಮಂಗಳೂರಿನ ಹೃದಯಭಾಗದಲ್ಲಿ ಬೀದಿ ಬದಿ ವ್ಯಾಪಾರದ ನೆಪದಲ್ಲಿ ರಾಜಾರೋಷವಾಗಿ ಅಕ್ರಮ ಹಣ ವಸೂಲಿ ಜಾಲ ಸಕ್ರಿಯವಾಗಿದ್ದು, ನಿಯಮ ಮೀರಿ ತಡರಾತ್ರಿಯವರೆಗೆ ನಡೆಯುವ ಹೋಟೆಲ್ಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಒತ್ತಾಯಿಸಿದ್ದಾರೆ. ನಗರದ ರಸ್ತೆ ಬದಿಗಳಲ್ಲಿ ನಡೆಯುತ್ತಿರುವ ಈ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಅವರು ಈಗಾಗಲೇ ಅಗತ್ಯ ಸಾಕ್ಷ್ಯ ಹಾಗೂ ದಾಖಲೆಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮತ್ತು ನಗರ ಪೊಲೀಸ್ ಆಯುಕ್ತರಿಗೆ ಅಧಿಕೃತವಾಗಿ ದೂರು ರವಾನಿಸಿದ್ದಾರೆ.
ವಿಶೇಷವಾಗಿ ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರಗಳಂದು ಸ್ಟೇಟ್ ಬ್ಯಾಂಕ್ ವೃತ್ತದಿಂದ ಹಿಡಿದು ರಾವ್ ಆಂಡ್ ರಾವ್ ಸರ್ಕಲ್ ಹಾಗೂ ಲೇಡಿಗೋಷನ್ ಆಸ್ಪತ್ರೆಯವರೆಗಿನ ಪಾದಚಾರಿ ಮಾರ್ಗಗಳನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ವ್ಯಾಪಾರ ನಡೆಸಲಾಗುತ್ತಿದೆ. ತಾವೆಂದು ಬಡ ವ್ಯಾಪಾರಿಗಳ ಹಿತಾಸಕ್ತಿಗೆ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಸರ್ಕಾರ ಮತ್ತು ಪಾಲಿಕೆ ಇವರಿಗಾಗಿ ಪ್ರತ್ಯೇಕ ‘ವೆಂಡಿಂಗ್ ಝೋನ್’ (ವ್ಯಾಪಾರ ವಲಯ) ನಿರ್ಮಿಸಿಕೊಡಬೇಕಿದೆ ಎಂದಿದ್ದಾರೆ. ಆದರೆ ಸದ್ಯದ ಫುಟ್ಪಾತ್ ಅತಿಕ್ರಮಣದಿಂದಾಗಿ ಆಸ್ಪತ್ರೆಗೆ ಬರುವ ಗರ್ಭಿಣಿಯರು, ರೋಗಿಗಳು ಹಾಗೂ ಸಾಮಾನ್ಯ ಜನರಿಗೆ ರಸ್ತೆಯಲ್ಲಿ ನಡೆಯಲೂ ಜಾಗವಿಲ್ಲದಂತಾಗಿದ್ದು, ಅಪಘಾತಗಳ ಭೀತಿಯಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ದುಸ್ಥಿತಿ ಬಂದೊದಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಬೀದಿ ಬದಿ ವ್ಯಾಪಾರಿಗಳ ಕಲ್ಯಾಣದ ಹೆಸರಿನಲ್ಲಿ ಸಿಐಟಿಯುನ ಪ್ರಮುಖ ನಾಯಕರಾದ ಇಮ್ತಿಯಾಜ್ ಹಾಗೂ ಸುನಿಲ್ ಬಜಾಲ್ ಅವರು ಪ್ರತಿಯೊಬ್ಬರಿಂದ ನಿತ್ಯ ತಲಾ 20 ರೂಪಾಯಿಯಂತೆ ಕಾನೂನುಬಾಹಿರವಾಗಿ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಪ್ರಸನ್ನ ರವಿ ನೇರ ಆರೋಪ ಮಾಡಿದ್ದಾರೆ. ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಇಳಿದಾಗಲೆಲ್ಲಾ ಈ ನಾಯಕರು ಬಡವರನ್ನು ದಾಳವಾಗಿ ಬಳಸಿ ಪ್ರತಿಭಟನೆಗೆ ಪ್ರಚೋದಿಸುತ್ತಾರೆ. ಆದರೆ ಅಂತಿಮವಾಗಿ ಪ್ರಕರಣಗಳು ದಾಖಲಾಗಿ ಸಂಕಷ್ಟಕ್ಕೆ ಸಿಲುಕುವುದು ಮಾತ್ರ ಅದೇ ಮುಗ್ಧ ಬಡ ವ್ಯಾಪಾರಿಗಳು. ಹೀಗಾಗಿ ಮಹಾನಗರ ಪಾಲಿಕೆಯು ನೈಜ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಮತ್ತು ಅಕ್ರಮ ವಸೂಲಿಗಾರರಿಗೆ ಬ್ರೇಕ್ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









