ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ (MCC) ಆರೋಗ್ಯ ಅಧಿಕಾರಿಗಳ ತಂಡವು ಸಾರ್ವಜನಿಕ ನೈರ್ಮಲ್ಯ ಮತ್ತು ಸುರಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಿಜೈ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಹಾಗೂ ಸ್ಟೇಟ್ ಬ್ಯಾಂಕ್ ವೃತ್ತದ ಸಮೀಪದ ಬೀದಿಬದಿ ಫಾಸ್ಟ್ ಫುಡ್ ಅಂಗಡಿಗಳ ಮೇಲೆ ಮಿಂಚಿನ ತಪಾಸಣೆ ನಡೆಸಿದೆ. ಯುವಜನರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕಳಪೆ ಮಾಂಸ, ನಿಷೇಧಿತ ಕೃತಕ ಬಣ್ಣಗಳು ಮತ್ತು ಆಪಾಯಕಾರಿ ಅಜಿನೊಮೊಟೊ ಬಳಸಿ ಪ್ರೈಡ್ ರೈಸ್, ನೂಡಲ್ಸ್ ಹಾಗೂ ಕಬಾಬ್ ತಯಾರಿಸುತ್ತಿದ್ದ ಅಂಗಡಿಗಳನ್ನು ಪತ್ತೆ ಹಚ್ಚಿ, ನಗದು ದಂಡ ವಿಧಿಸುವುದರ ಜೊತೆಗೆ ಹಾನಿಕಾರಕ ರಾಸಾಯನಿಕಗಳನ್ನು ಜಪ್ತಿ ಮಾಡಲಾಗಿದೆ.
ಮುಖ್ಯವಾಗಿ ಸ್ಟೇಟ್ ಬ್ಯಾಂಕ್ ವ್ಯಾಪ್ತಿಯಲ್ಲಿ ನಿಷೇಧಿತ ಬಣ್ಣಗಳನ್ನು ಬಳಸಿ ಅಡುಗೆ ಮಾಡುತ್ತಿದ್ದ 3 ಮಳಿಗೆಗಳಿಗೆ ಅಧಿಕಾರಿಗಳು ಒಟ್ಟು ₹6,000 ದಂಡ ವಿಧಿಸಿದ್ದಾರೆ. ಅಡುಗೆ ಎಣ್ಣೆಯನ್ನು ಪದೇ ಪದೇ ಕಾಯಿಸುವುದರಿಂದ ಅದರಲ್ಲಿ ಕ್ಯಾನ್ಸರ್, ಹೃದಯಾಘಾತ ಮತ್ತು ಜೀರ್ಣಾಂಗ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುವ ಉಚಿತ ರಾಡಿಕಲ್ಸ್ (Free radicals) ಹಾಗೂ ವಿಷಕಾರಿ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಅದೇ ರೀತಿ ರುಚಿ ಹೆಚ್ಚಿಸಲು ಅಪರಿಮಿತವಾಗಿ ಬಳಸುವ ಅಜಿನೊಮೊಟೊದಿಂದ (MSG) ರಕ್ತದೊತ್ತಡ, ಡಯಾಬಿಟಿಸ್, ಅತಿಯಾದ ಹೊಟ್ಟೆನೋವು ಹಾಗೂ ಅಲರ್ಜಿಗಳು ಉಂಟಾಗಿ, ಭವಿಷ್ಯದಲ್ಲಿ ಯುವಕರ ಆರೋಗ್ಯ ಕ್ಷೀಣಿಸಲು ದಾರಿಯಾಗುತ್ತದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.
ತಪಾಸಣೆಯ ವೇಳೆಯಲ್ಲಿ ಅಧಿಕಾರಿಗಳು ಪ್ರತಿಯೊಬ್ಬ ಆಹಾರ ವ್ಯಾಪಾರಿಯು ಕಡ್ಡಾಯವಾಗಿ ಆಹಾರ ಸುರಕ್ಷತೆ ಹಾಗೂ ನೈರ್ಮಲ್ಯದ ನಿಯಮಾವಳಿಗಳನ್ನು ಪಾಲಿಸಲೇಬೇಕು ಎಂದು ಬಿಗಿಯಾದ ಸೂಚನೆ ನೀಡಿದ್ದಾರೆ. ಸಾರ್ವಜನಿಕ ಜೀವದ ಜೊತೆ ಚೆಲ್ಲಾಟವಾಡಿ, ಕಾನೂನು ಉಲ್ಲಂಘಿಸಿ ಆರೋಗ್ಯಕ್ಕೆ ಮಾರಕವಾದ ವಸ್ತುಗಳನ್ನು ಬಳಸುವ ವ್ಯಾಪಾರಿಗಳ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಫಾಸ್ಟ್ ಫುಡ್ ಜಾಲವು ಕೇವಲ ಬೀದಿಬದಿ ಮಳಿಗೆಗಳಿಗೆ ಸೀಮಿತವಾಗಿ ಉಳಿದಿಲ್ಲ. ಇತ್ತೀಚಿನ ದಿನಗಳಲ್ಲಿ ಇವು ಬ್ರ್ಯಾಂಡೆಡ್ ಕೆಫೆಗಳು ಹಾಗೂ ಕ್ಯಾಂಟೀನ್ಗಳ ರೂಪದಲ್ಲಿ ಪ್ರಮುಖ ವಾಣಿಜ್ಯ ಸಂಕೀರ್ಣಗಳಲ್ಲೂ (Commercial Complexes) ವ್ಯಾಪಕವಾಗಿ ಕಾರ್ಯಾಚರಿಸುತ್ತಿವೆ. ಮುಖ್ಯವಾಗಿ ಶಾಲಾ-ಕಾಲೇಜುಗಳ ಸುತ್ತಮುತ್ತಲಿನ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ಇವು ಅಣಬೆಗಳಂತೆ ತಲೆಎತ್ತುತ್ತಿದ್ದು, ಯುವಜನತೆಯ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿವೆ.
ಆಕರ್ಷಕ ಒಳಾಂಗಣ ವಿನ್ಯಾಸ, ವರ್ಣರಂಜಿತ ದೀಪಗಳು ಮತ್ತು ಸೋಶಿಯಲ್ ಮೀಡಿಯಾಗಳ ಆಕರ್ಷಕ ಪ್ರಚಾರಗಳ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯುವ ಈ ಕೆಫೆಗಳು, ಅತ್ಯಂತ ಕಡಿಮೆ ಬೆಲೆಯ ಕಾಂಬೊ ಆಫರ್ಗಳ ಹೆಸರಿನಲ್ಲಿ ಕಳಪೆ ಗುಣಮಟ್ಟದ ಫಾಸ್ಟ್ ಫುಡ್ಗಳನ್ನು ಮಾರಾಟ ಮಾಡುತ್ತಿವೆ. ಇಂತಹ ದೊಡ್ಡ ವಾಣಿಜ್ಯ ಸಂಕೀರ್ಣಗಳ ಮಳಿಗೆಗಳಲ್ಲೂ ರುಚಿ ಹೆಚ್ಚಿಸಲು ಅಜಿನೊಮೊಟೊ (MSG), ನಿಷೇಧಿತ ಬಣ್ಣಗಳು ಹಾಗೂ ಪದೇ ಪದೇ ಕಾಯಿಸಿದ ಹಾನಿಕಾರಕ ಅಡುಗೆ ಎಣ್ಣೆಯನ್ನು ಯಥೇಚ್ಛವಾಗಿ ಬಳಸಲಾಗುತ್ತಿದೆ.
ಇದರಿಂದಾಗಿ ಎಳೆ ವಯಸ್ಸಿನಲ್ಲೇ ವಿದ್ಯಾರ್ಥಿಗಳು ಬೊಜ್ಜು, ಫ್ಯಾಟಿ ಲಿವರ್, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇಂತಹ ಆಹಾರಗಳಲ್ಲಿರುವ ರಾಸಾಯನಿಕಗಳು ಮಾನಸಿಕವಾಗಿ ವ್ಯಸನವನ್ನು ಉಂಟುಮಾಡುವುದಲ್ಲದೆ, ವಿದ್ಯಾರ್ಥಿಗಳಲ್ಲಿ ಜಡತ್ವವನ್ನು ಹೆಚ್ಚಿಸಿ ಏಕಾಗ್ರತೆ ಹಾಗೂ ಜ್ಞಾಪಕ ಶಕ್ತಿಯನ್ನು ಕುಂಠಿತಗೊಳಿಸುತ್ತವೆ.
ಆದ್ದರಿಂದ ಶಾಲೆ ಮತ್ತು ಕಾಲೇಜುಗಳ ಸುತ್ತಮುತ್ತಲಿರುವ ವಾಣಿಜ್ಯ ಸಂಕೀರ್ಣಗಳು ಹಾಗೂ ಕೆಫೆಗಳ ಮೇಲೆಯೂ ಆಹಾರ ಭದ್ರತಾ ಇಲಾಖೆಯ ಅಧಿಕಾರಿಗಳು ಕಠಿಣ ತಪಾಸಣೆ ನಡೆಸುವುದು ಇಂದಿನ ತುರ್ತು ಅಗತ್ಯವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










