ಜಗತ್ತು ಸುಂದರವಾಗಬೇಕಾದರೆ ಮನುಷ್ಯನಲ್ಲಿ ಹೃದಯವಂತಿಕೆ ಇರಬೇಕು :ಮಾತಾ ಅಮೃತಾನಂದಮಯಿ

12:59 PM, Monday, February 11th, 2013
Share
1 Star2 Stars3 Stars4 Stars5 Stars
(No Ratings Yet)
Loading...

Matha Amritanandamayiಮಂಗಳೂರು : ಇತ್ತೀಚೆಗಿನ ವರ್ಷಗಳಲ್ಲಿ ಬುದ್ಧಿವಂತಿಕೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಆದರೆ ಜಗತ್ತು ಸುಂದರವಾಗಬೇಕಾದರೆ, ತಾಳ್ಮೆ, ಸಹನೆಗಳು ಹೆಚ್ಚಾಗಬೇಕಾದರೆ ಮನುಷ್ಯನಲ್ಲಿ ಹೃದಯವಂತಿಕೆ ಇರಬೇಕು. ಬುದ್ಧಿವಂತಿಕೆಯು ಎರಡಲಗಿನ ಕತ್ತಿಯಂತೆ. ಅದು ಕೆಲವೊಮ್ಮೆ ಸಮಾಜವನ್ನು ವಿಘಟನೆಗೊಳಿಸಲೂಬಹುದು. ಆದರೆ ಹೃದಯವಂತಿಕೆ ಎನ್ನುವುದು ಸೂಜಿಯಂತೆ. ಅದು ಪ್ರೀತಿಯಿಂದ ಮನುಷ್ಯರನ್ನು ಜೋಡಿಸಬಲ್ಲುದು ಎಂದು ಮಾತಾ ಅಮೃತಾನಂದಮಯಿ ಹೇಳಿದರು.

ಬೋಳೂರಿನಲ್ಲಿರುವ ಅಮೃತ ವಿದ್ಯಾಲಯದಲ್ಲಿ ಶನಿವಾರ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಸಮಗ್ರ ಜಗತ್ತು ಏಕಭಾವದ ವಿನ್ಯಾಸದಿಂದ ರೂಪುಗೊಂಡಿದೆ. ಬಣ್ಣಗಳಲ್ಲಿ ವಿವಿಧ ಬಗೆಗಳಿದ್ದು ಅವುಗಳೆಲ್ಲ ಒಟ್ಟು ಸೇರಿದಾಗ ಏಳು ಬಣ್ಣಗಳ ಒಂದು ಸುಂದರ ಕಾಮನಬಿಲ್ಲು ನಿರ್ಮಾಣವಾಗುತ್ತದೆ ಅದೇರೀತಿ ಸಂಗೀತದಲ್ಲೂ ಏಳು ಸ್ವರಗಳಿದ್ದು ಅವುಗಳೆಲ್ಲ ಒಟ್ಟಾಗಿ ಸೇರಿದಾಗ ಒಂದು ಸುಮಧುರವಾದ ಹಾಡು ಸೃಷ್ಟಿಯಾಗುತ್ತದೆ. ಮಾನವ ಸಮಾಜ ವಿವಿಧತೆಯಿಂದ ಕೂಡಿದ್ದು ಎಲ್ಲರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಒಂದು ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಮಾತಾ ಅಮೃತಾನಂದಮಯೀ ತಮ್ಮ ಪ್ರವಚನದುದ್ದಕ್ಕೂ ಮೌಲ್ಯ ಶಿಕ್ಷಣ, ಪ್ರಕೃತಿಯ ರಕ್ಷಣೆ ಮತ್ತು ಶಾಂತಿಯುತ ಸಮಾಜ ನಿರ್ಮಾಣಕ್ಕಾಗಿ ಮಾನವೀಯತೆಗೆ ಹೆಚ್ಚಿನ ಒತ್ತು ಕೊಡುವ ಅಗತ್ಯ ಬಗ್ಗೆ ಹೇಳಿದರು. ಆಧುನಿಕ ಜಗತ್ತಿನ ಭೋಗ, ಲಾಲಸೆಗಳಿಂದಾಗಿ ಜಗತ್ತು ಈಗ ಬೇರೆ ಬೇರೆ ರೂಪದಲ್ಲಿ ವಿಭಜನೆ ಮತ್ತು ವಿಘಟನೆ ಆಗುತ್ತಿರುವುದು ಕಳವಳಕಾರಿ ಸಂಗತಿ. ಈ ಹಿನ್ನೆಲೆಯಲ್ಲಿ ಸಹೋದರತೆ ಮತ್ತು ಏಕತೆಯ ಜಗತ್ತು ರೂಪಿಸಲು ಎಲ್ಲರೂ ಪಣ ತೊಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಕೃಷ್ಣ ಜೆ. ಪಾಲೆಮಾರ್, ಉಪಮೇಯರ್ ಅಮಿತಕಲಾ, ಮಾಜಿ ಸಂಸದೆ ಮನೋರಮಾ ಮಧ್ವರಾಜ್, ಕಾರ್ಪೊರೇಟರ್ ರೂಪಾ ಡಿ. ಬಂಗೇರ, ಸ್ಥಳೀಯ ಮಠದ ಮುಖ್ಯಸ್ಥೆ ಮಂಗಳಾಮೃತ ಚೈತನ್ಯ, ಡಾ. ಜೀವರಾಜ್ ಸೊರಕೆ, ಸತ್ಸಂಗ ಮತ್ತು ಪ್ರವಚನದುದ್ದಕ್ಕೂ ಭಾಗವಹಿಸಿದ್ದರು.

ಭಾನುವಾರ ಬೆಳಗ್ಗೆ 5.30ಕ್ಕೆ ಧ್ಯಾನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಂತರ ಸಾಮೂಹಿಕ ಲಲಿತಾ ಸಹಸ್ರನಾಮ ಯಜ್ಞ ರಾಹುದೋಷ ನಿವಾರಣಾ ಪೂಜೆ ನಡೆಯಿತು. ವಿದ್ಯಾರ್ಥಿಗಳಿಗೆ ನೆರವು ವಿತರಣೆ, ವೃದ್ಧೆಯರಿಗೆ ಪಿಂಚಣಿ ವಿತರಣೆ ನಡೆಯಿತು. 11.30 ಸುಮಾರಿಗೆ ಮಾತಾ ಅಮೃತಾನಂದಮಯೀ ಸ್ವತಃ ಭಜನ್‌ಗಳನ್ನು ಹಾಡಿದರು. ಭಕ್ತರು ಭಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಗಣಪತಿ ಶ್ಲೋಕದೊಂದಿಗೆ ಆರಂಭವಾದ ಸತ್ಸಂಗದಲ್ಲಿ ಕೃಷ್ಣನ ಹಾಡುಗಳು, ವೈರಾಗ್ಯಗೀತೆಗಳು, ಕೃಷ್ಣ- ಗೋಪಿಯರ ಗೀತೆಗಳನ್ನು ಹಾಡಿದರು. ‘ಅಮ್ಮನ ನಾಡುಡು ಬುಲಿಪುನ ಒಂಜಿ ಬಾಲೆನ್ ತೂಲೆ’ ಎಂಬ ತುಳು ಹಾಡು ಸೇರಿದಂತೆ ಕನ್ನಡ, ಹಿಂದಿ, ಸಂಸ್ಕೃತ ಹಾಡುಗಳನ್ನು ಅಮ್ಮ ಹಾಡಿದರು. ಸಭಿಕರು ಅದನ್ನು ಪುನರುಚ್ಛರಿಸಿ ತಲ್ಲೀನರಾದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English