ಮಂಗಳೂರು : ಪ್ರತಿಷ್ಠಿತ ಶ್ರೀನಿವಾಸ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ಸಂಸ್ಥಾಪಕ ಅಧ್ಯಕ್ಷರು ಹಾಗೂ ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಡಾ. ಸಿಎ ಎ. ರಾಘವೇಂದ್ರ ರಾವ್ (89) ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಕರಾವಳಿಯ ಶಿಕ್ಷಣ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಬುಧವಾರ ಬೆಳಿಗ್ಗೆ 11 ಗಂಟೆಗೆ ಮುಕ್ಕದಲ್ಲಿರುವ ಶ್ರೀನಿವಾಸ ಕಾಲೇಜು ಕ್ಯಾಂಪಸ್ನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನದ ನಂತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತಿಮ ಸಂಸ್ಕಾರ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
1937ರಲ್ಲಿ ಉಡುಪಿಯ ಬೆನಗಲ್ನಲ್ಲಿ ಜನಿಸಿದ ಇವರು, ವಾಣಿಜ್ಯ ಪದವಿ ಬಳಿಕ ಚಾರ್ಟರ್ಡ್ ಅಕೌಂಟೆನ್ಸಿ ಪೂರೈಸಿದ್ದರು. 1965ರಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ‘M/S ರಾಘವೇಂದ್ರ ಚಾರ್ಟರ್ಡ್ ಅಕೌಂಟೆಂಟ್ಸ್’ ಸಂಸ್ಥೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು. ಐಸಿಎಐ (ICAI) ಮಂಡಳಿಯ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಲ್ಲದೆ, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ವೃತ್ತಿಪರ ನೈಪುಣ್ಯತೆ ಮತ್ತು ದಕ್ಷತೆ ಇಂದಿನ ಸಿಎ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.
ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅನನ್ಯ. 1988ರಲ್ಲಿ ‘ಎ ಶಾಮ ರಾವ್ ಪ್ರತಿಷ್ಠಾನ’ವನ್ನು ಸ್ಥಾಪಿಸುವ ಮೂಲಕ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುವ ಸಂಕಲ್ಪ ಮಾಡಿದ್ದರು. ಕೇವಲ ಏಳು ವಿದ್ಯಾರ್ಥಿಗಳಿಂದ ಆರಂಭವಾದ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜು, ಇಂದು ಬೃಹತ್ ಶೈಕ್ಷಣಿಕ ಜಾಲವಾಗಿ ಬೆಳೆದು ನಿಂತಿದೆ. ಶಿಕ್ಷಣದ ಜೊತೆಗೆ ಆತಿಥ್ಯ ವಲಯದಲ್ಲೂ ಕ್ರಾಂತಿ ಮಾಡಿದ ಇವರು, ರಾಜ್ಯದ ಮೊದಲ ತ್ರಿ-ಸ್ಟಾರ್ ಶುದ್ಧ ಸಸ್ಯಾಹಾರಿ ಹೋಟೆಲ್ ‘ಶ್ರೀನಿವಾಸ್’ ಅನ್ನು ಮಂಗಳೂರಿನಲ್ಲಿ ಪ್ರಾರಂಭಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಮೃತರು ಪತ್ನಿ ವಿಜಯಲಕ್ಷ್ಮಿ ರಾವ್, ಪುತ್ರ (ಶ್ರೀನಿವಾಸ ವಿವಿ ಸಹ ಕುಲಾಧಿಪತಿ) ಸಿಎ ಶ್ರೀನಿವಾಸ ರಾವ್, ಪುತ್ರಿ ಪದ್ಮನಿ ರಾವ್ ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಶೂನ್ಯದಿಂದ ಬೃಹತ್ ಸಾಮ್ರಾಜ್ಯ ಕಟ್ಟಿದ ಅವರ ಜೀವನಗಾಥೆ ಮುಂದಿನ ತಲೆಮಾರಿಗೆ ಸದಾ ಸ್ಫೂರ್ತಿದಾಯಕವಾಗಿದೆ.
ಸಂತಾಪ
ಶಿಸ್ತು, ಮೌಲ್ಯಾಧಾರಿತ ಶಿಕ್ಷಣ ಮತ್ತು ಸೇವಾಭಾವನೆಗೆ ಹೆಸರಾಗಿದ್ದ ಡಾ. ರಾವ್, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಮಾರ್ಗದರ್ಶಕರಾಗಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿತ್ವ ಆದರ್ಶಪ್ರಾಯರಾಗಿದ್ದರು. ಡಾ. ಸಿಎ ಎ. ರಾಘವೇಂದ್ರ ರಾವ್ ರವರ ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ, ಅವರ ಕುಟುಂಬಕ್ಕೆ, ಬಂಧು, ಹಿತೈಷಿಗಳಿಗೆ, ಅಪಾರ ಸಂಖ್ಯೆಯ ವಿದ್ಯಾರ್ಥಿಗಳಿಗೆ ಭಗವಂತ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಮತ್ತು ವಿಶ್ವ ಹಿಂದೂ ಪರಿಷದ್ ಪ್ರಾಂತ ಪ್ರಮುಖರಾದ ಡಾ ಎಂಬಿ ಪುರಾಣಿಕ್ ಸಂತಾಪ ಸೂಚಿಸಿದರು.
ಸಂತಾಪ
ಮಂಗಳೂರಿನ ಖ್ಯಾತ ಉದ್ಯಮಿ ಹಾಗೂ ಶ್ರೀನಿವಾಸ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸಿ.ಎ. ಎ. ರಾಘವೇಂದ್ರ ರಾವ್ ಅವರ ನಿಧನಕ್ಕೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಂಗಳೂರಿನಲ್ಲಿ ಶ್ರೀನಿವಾಸ ಸಮೂಹ ಸಂಸ್ಥೆಗಳನ್ನು ಸ್ಥಾಪಿಸಿ ಶೈಕ್ಷಣಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕಾಗಿದ್ದ ರಾಘವೇಂದ್ರ ರಾವ್ ಅವರ ನಿಧನವು ತುಂಬಲಾರದ ನಷ್ಟವಾಗಿದೆ. 80ರ ದಶಕದಲ್ಲೇ ಮಂಗಳೂರಿನಲ್ಲಿ ತ್ರಿ-ಸ್ಟಾರ್ ಹೋಟೆಲ್ನ್ನು ಆರಂಭಿಸಿ ನಗರದ ಸಮಗ್ರ ಬೆಳವಣಿಗೆಗೆ ಅನನ್ಯ ಕೊಡುಗೆ ನೀಡಿರುವ ಅವರ ದೂರದೃಷ್ಟಿ ಚಿಂತನೆ ಹಾಗೂ ಉದ್ಯಮ ಕ್ಷೇತ್ರದ ಯಶಸ್ವಿ ಪಯಣ ಯುವ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ. ಅವರು ಕೇವಲ ಒಬ್ಬ ಯಶಸ್ವಿ ಉದ್ಯಮಿಯಾಗಿ ಮಾತ್ರವಲ್ಲದೆ, ನೂರಾರು ಕುಟುಂಬಗಳಿಗೆ ಉದ್ಯೋಗದಾತರಾಗಿ ಸಲ್ಲಿಸಿದ ಸೇವೆ ಸ್ಮರಣೀಯವಾದುದು. ಅದರಲ್ಲೂ ವಿಶೇಷವಾಗಿ, ಹಿಂದೂ ಸಮಾಜದ ಎಲ್ಲಾ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಅವರು ಸದಾ ಬೆಂಬಲವಾಗಿ ನಿಲ್ಲುತ್ತಿದ್ದರು. ಸಮಾಜದ ಹಿತದೃಷ್ಟಿಯಿಂದ ನಡೆಯುವ ಕಾರ್ಯಕ್ರಮಗಳಿಗೆ ಅವರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಅನನ್ಯವಾದುದು ಎಂದು ತಿಳಿಸಿದ್ದಾರೆ.
ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ಮತ್ತು ಶ್ರೀನಿವಾಸ ಸಂಸ್ಥೆಯ ಸಿಬ್ಬಂದಿ ವರ್ಗಕ್ಕೆ ಕರುಣಿಸಲಿ” ಎಂದು ಪ್ರಾರ್ಥಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









