ಮಂಗಳೂರು: ಕೇಂದ್ರ ಸರ್ಕಾರದ ವಿಬಿ-ಜಿ ರಾಮ್ ಜಿ (VB-G RAM G) ಕಾಯ್ದೆಯ ಬಗ್ಗೆ ಜನಜಾಗೃತಿ ಮೂಡಿಸಲು ಹಾಗೂ ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಆಗ್ರಹಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು. ನಗರದ ಬಿಜೆಪಿ ಜಿಲ್ಲಾ ಕಚೇರಿಯಿಂದ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯವರೆಗೆ ನಡೆದ ಈ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು, ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಜನರಿಗೆ ತಲುಪಬೇಕಾದ ಹಣ ಸೋರಿಕೆಯಾಗುತ್ತಿತ್ತು ಎಂದು ಅವರೇ ಒಪ್ಪಿಕೊಂಡಿದ್ದರು. ಆದರೆ ಇಂದು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಒಂದೇ ಒಂದು ರೂಪಾಯಿ ಭ್ರಷ್ಟಾಚಾರವಿಲ್ಲದ ಆಡಳಿತ ನಡೆಯುತ್ತಿದ್ದು, ಅದರ ಭಾಗವಾಗಿರುವ ಹೊಸ ಕಾಯ್ದೆಯನ್ನು ಕಾಂಗ್ರೆಸ್ ವಿನಾಕಾರಣ ವಿರೋಧಿಸುತ್ತಿದೆ ಎಂದು ಟೀಕಿಸಿದರು.
ಶಾಸಕ ವೇದವ್ಯಾಸ ಕಾಮತ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ವಿಬಿ-ಜಿ ರಾಮ್ ಜಿ ಕಾಯ್ದೆಯ ಮೂಲಕ ಬಡವರಿಗೆ ದುಡಿಯುವ ದಿನಗಳನ್ನು 100 ರಿಂದ 125 ಕ್ಕೆ ಏರಿಸುವ ಮಹತ್ವದ ನಿರ್ಧಾರವನ್ನು ಕಾಂಗ್ರೆಸ್ ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮನರೇಗಾ ಹೆಸರಿನಲ್ಲಿ ನಡೆಯುತ್ತಿದ್ದ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರಕ್ಕೆ ಈಗ ಕಡಿವಾಣ ಬಿದ್ದಿರುವುದರಿಂದ ಕಾಂಗ್ರೆಸ್ಸಿಗರಲ್ಲಿ ಅಸಹನೆ ಉಂಟಾಗಿದೆ. ರಾಜ್ಯ ಸರ್ಕಾರದ ದುರಾಡಳಿತದಿಂದ ಜನರು ಇ-ಖಾತಾ, ಮರಳು ಮತ್ತು ಕೆಂಪು ಕಲ್ಲು ಸಿಗದೆ ಸಂಕಷ್ಟದಲ್ಲಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಕರಾವಳಿ ಭಾಗದ ಬಗ್ಗೆ ಹಗುರವಾಗಿ ಮಾತನಾಡುವ ಮೊದಲು, ಶಿಕ್ಷಣ, ಐಟಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಈ ಭಾಗದ ಕೊಡುಗೆಯನ್ನು ಅರಿಯಲಿ ಎಂದು ಅವರು ತಿರುಗೇಟು ನೀಡಿದರು.
ಈ ಪಾದಯಾತ್ರೆಯಲ್ಲಿ ಪ್ರಮುಖರಾದ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ತಿಲಕ್ ರಾಜ್ ಕೃಷ್ಣಾಪುರ ಸೇರಿದಂತೆ ಪಾಲಿಕೆಯ ನಿಕಟಪೂರ್ವ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಜನಸಾಮಾನ್ಯರು ಜಾಗೃತರಾಗಬೇಕು ಎಂದು ಈ ವೇಳೆ ಮುಖಂಡರು ಕರೆ ನೀಡಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









