ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದಲ್ಲಿ ಮಾರ್ಚ್ 3 ರಂದು ಮಧ್ಯಾಹ್ನ ವಿಮಾನವೊಂದು ಅತೀ ಕೆಳಮಟ್ಟದಲ್ಲಿ ಹಾರಾಟ ನಡೆಸಿದ್ದು, ಸಾರ್ವಜನಿಕರಲ್ಲಿ ಕೆಲಕಾಲ ತೀವ್ರ ಆತಂಕ ಹಾಗೂ ಕುತೂಹಲ ಮೂಡಿಸಿತ್ತು. ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಇರುವ ಈ ಸಂದರ್ಭದಲ್ಲಿ, ಏಕಾಏಕಿ ದೊಡ್ಡ ಗಾತ್ರದ ವಿಮಾನವೊಂದು ಭೂಮಿಗೆ ಅತೀ ಸಮೀಪದಲ್ಲಿ ಕಂಡಾಗ ಜನರಲ್ಲಿ ಗೊಂದಲ ಸೃಷ್ಟಿಯಾಯಿತು. ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವಠಾರದ ಗದ್ದೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಈ ವಿಮಾನ ಸುಮಾರು 10 ರಿಂದ 15 ಬಾರಿ ಪ್ರದಕ್ಷಿಣೆ ಹಾಕಿತ್ತು.
ಆರಂಭದಲ್ಲಿ ಈ ಹಾರಾಟದ ಉದ್ದೇಶದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲದ ಕಾರಣ ಜನರು ಭಯಭೀತರಾಗಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಇದು ಭೂ ವಿಜ್ಞಾನಕ್ಕೆ ಸಂಬಂಧಿಸಿದ ಸರ್ವೇ ಕಾರ್ಯ ಎಂದು ತಿಳಿದುಬಂದಾಗ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಭೂಮಿಯ ರಚನೆ ಹಾಗೂ ಭೂಭೌತಿಕ ಅಧ್ಯಯನಕ್ಕಾಗಿ (Geophysical Survey) ಈ ಹಾರಾಟವನ್ನು ನಡೆಸಲಾಗುತ್ತಿದ್ದು, ವೈಜ್ಞಾನಿಕ ಉದ್ದೇಶಗಳಿಗಾಗಿ ಈ ಸಮೀಕ್ಷೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ವಿಶೇಷ ವಿಮಾನವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತನ್ನ ಹಾರಾಟವನ್ನು ಆರಂಭಿಸಿತ್ತು. ಚಿಕ್ಕಮಗಳೂರು ಮತ್ತು ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿ ಭೂವೈಜ್ಞಾನಿಕ ಸರ್ವೆ ನಡೆಸುವ ಗುರಿಯನ್ನು ಇದು ಹೊಂದಿದೆ. ತಾಂತ್ರಿಕ ಅಧ್ಯಯನಕ್ಕಾಗಿ ಕೆಳಮಟ್ಟದಲ್ಲಿ ಹಾರಾಟ ನಡೆಸುವುದು ಅನಿವಾರ್ಯವಾಗಿದ್ದರಿಂದ ಪುತ್ತೂರು ನಗರದ ಜನರಿಗೆ ಈ ಅಪರೂಪದ ಹಾಗೂ ಆತಂಕಕಾರಿ ದೃಶ್ಯ ಕಂಡುಬಂದಿತ್ತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









