ಪುತ್ತೂರು : ಉಪ್ಪಿನಂಗಡಿ ಸಮೀಪದ ಕಲ್ಲೇರಿಯಲ್ಲಿ ಸೋಮವಾರ ಸಂಜೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐದು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ದ್ವಿಚಕ್ರ ವಾಹನಕ್ಕೆ ಕಾರೊಂದು ವೇಗವಾಗಿ ಢಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದ್ದು, ಮೃತ ಬಾಲಕಿಯನ್ನು ತಣ್ಣೀರುಪಂತ ಗ್ರಾಮದ ಕೊಡಂಗೆ ನಿವಾಸಿ ಸುಹೈರಾ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಬಾಲಕಿಯ ತಾಯಿ ಮತ್ತು ಅಜ್ಜ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಣ್ಣೀರುಪಂತದ ಕೊಡಂಗೆ ನಿವಾಸಿ ಇಸ್ಮಾಯಿಲ್ (60) ಅವರು ತಮ್ಮ ಮಗಳು ಸಾಜಿರಾ (33) ಮತ್ತು ಮೊಮ್ಮಗಳು ಸುಹೈರಾ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಕಲ್ಲೇರಿಯಿಂದ ಕುಪ್ಪೆಟ್ಟಿಯ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ವೇಣೂರು ಮೂಲದ ಶಿವಪ್ರಸಾದ್ ಎಂಬುವವರು ಚಲಾಯಿಸುತ್ತಿದ್ದ ಕಾರು ವಿರುದ್ಧ ದಿಕ್ಕಿನಿಂದ ಅತೀ ವೇಗವಾಗಿ ಬಂದು ಇವರ ವಾಹನಕ್ಕೆ ನೇರವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟರ್ನಲ್ಲಿದ್ದ ಮೂವರೂ ರಸ್ತೆಗೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡಿದ್ದರು.
ಗಾಯಾಳುಗಳನ್ನು ತಕ್ಷಣವೇ ಸ್ಥಳೀಯರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಬಾಲಕಿ ಸುಹೈರಾ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾಳೆ. ಇಸ್ಮಾಯಿಲ್ ಮತ್ತು ಸಾಜಿರಾ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









