ಸುಳ್ಯ: ಗೂನಡ್ಕದ ಲಾಡ್ಜ್ನಲ್ಲಿ ಯುವ ಉದ್ಯಮಿ ನೇಣಿಗೆ ಶರಣು; ಆತ್ಮಹತ್ಯೆಗೆ ಕಾರಣ ನಿಗೂಢ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗೂನಡ್ಕದಲ್ಲಿ ಯುವ ಉದ್ಯಮಿಯೊಬ್ಬರು ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಪಾಣೆಮಂಗಳೂರು ಸಮೀಪದ ಬೊಂಡಾಲ ಶಾಂತಿಗುಡ್ಡೆ ನಿವಾಸಿ, 28 ವರ್ಷದ ತಿಲಕರಾಜ್ ಮೃತಪಟ್ಟ ದುರ್ದೈವಿ. ಕಲ್ಲಡ್ಕದಲ್ಲಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಉದ್ಯಮ ನಡೆಸುತ್ತಿದ್ದ ಇವರು, ಅತ್ಯಂತ ಕಿರಿಯ ವಯಸ್ಸಿನಲ್ಲಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಶನಿವಾರ ಬೆಳಿಗ್ಗೆ ಗೂನಡ್ಕದ ಲಾಡ್ಜ್ ಒಂದರ ಕೊಠಡಿಯಲ್ಲಿ ಇವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತ ತಿಲಕರಾಜ್ ಅವರು ಮಾರ್ಚ್ 20ರ ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ. ಕಲ್ಲಡ್ಕದಿಂದ ತಮ್ಮ ಕಾರಿನಲ್ಲಿ ಮಡಿಕೇರಿ ರಸ್ತೆಯ ಮೂಲಕ ಪ್ರಯಾಣ ಬೆಳೆಸಿದ್ದ ಇವರು, ಅಂದೇ ಸಂಜೆ ಗೂನಡ್ಕದ ಲಾಡ್ಜ್ನಲ್ಲಿ ಕೊಠಡಿ ಪಡೆದು ವಾಸ್ತವ್ಯ ಹೂಡಿದ್ದರು. ಶುಕ್ರವಾರ ರಾತ್ರಿಯ ನಂತರ ಅವರು ಮನೆಯವರ ಯಾವುದೇ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ಶನಿವಾರ ಬೆಳಿಗ್ಗೆ ಬಹಳ ಹೊತ್ತಾದರೂ ತಿಲಕರಾಜ್ ಅವರು ಉಳಿದುಕೊಂಡಿದ್ದ ಕೊಠಡಿಯ ಬಾಗಿಲು ತೆರೆಯದಿದ್ದಾಗ ಲಾಡ್ಜ್ ಸಿಬ್ಬಂದಿಗೆ ಅನುಮಾನ ಉಂಟಾಗಿದೆ.
ಕೂಡಲೇ ಲಾಡ್ಜ್ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಗಿಲು ತೆರೆದು ಪರಿಶೀಲಿಸಿದಾಗ ಆತ್ಮಹತ್ಯೆಯ ಪ್ರಕರಣ ಬೆಳಕಿಗೆ ಬಂದಿದೆ. ಯುವ ಉದ್ಯಮಿಯ ಈ ತೀವ್ರ ನಿರ್ಧಾರಕ್ಕೆ ನಿಖರವಾದ ಕಾರಣಗಳು ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಪೊಲೀಸರು ಸ್ಥಳ ಮಹಜರು ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









