ಉಡುಪಿ : ನಗರಾಭಿವೃದ್ಧಿ ಪ್ರಾಧಿಕಾರವು ಕಳೆದ ಎರಡು ವರ್ಷಗಳಿಂದ ಏಕ ವಿನ್ಯಾಸ ನಕ್ಷೆ (ಸಿಂಗಲ್ ಲೇಔಟ್) ಅನುಮೋದನೆ ನೀಡದೆ ಸತಾಯಿಸುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಇಂದಿನಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಬಡಾನಿಡಿಯೂರು ಗ್ರಾಮದ 90 ಸೆಂಟ್ಸ್ ಜಾಗದಲ್ಲಿ ರೆಸಾರ್ಟ್ ನಿರ್ಮಿಸಲು ಉದ್ದೇಶಿಸಿರುವ ಅವರು, 2024ರ ಮಾರ್ಚ್ 20ರಂದೇ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಇಂದು ಬೆಳಿಗ್ಗೆ 9:30ಕ್ಕೆ ಪ್ರಾಧಿಕಾರದ ಕಚೇರಿ ಮುಂದೆ ಧರಣಿ ಕುಳಿತಿರುವ ಅವರಿಗೆ ವಿವಿಧ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಘುಪತಿ ಭಟ್ ಅವರು, ಪ್ರಾಧಿಕಾರವು ಒಂದೋ ನಕ್ಷೆಗೆ ಅನುಮೋದನೆ ನೀಡಬೇಕು ಅಥವಾ ತಾಂತ್ರಿಕ ಕಾರಣಗಳಿದ್ದರೆ ನೀಡಲು ಸಾಧ್ಯವಿಲ್ಲ ಎಂಬ ಸ್ಪಷ್ಟವಾದ ‘ಹಿಂಬರಹ’ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಹಿಂಬರಹ ನೀಡಿದರೆ ತಕ್ಷಣವೇ ಧರಣಿ ಕೈಬಿಟ್ಟು ಕಾನೂನು ಹೋರಾಟ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ. ಅಧಿಕಾರಿಗಳ ವಿಳಂಬ ನೀತಿಯಿಂದಾಗಿ ಉದ್ಯಮಿಗಳಿಗೆ ತೊಂದರೆಯಾಗುತ್ತಿದೆ ಮತ್ತು ಇದು ರಾಜಕೀಯ ಪ್ರೇರಿತ ಎಂಬ ಸಂಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಪ್ರಾಧಿಕಾರದ ಆಯುಕ್ತ ಮಹೇಶ್ ಜೆ., ಅರ್ಜಿಯಲ್ಲಿ ಯಾವುದೇ ಕಾನೂನು ತೊಡಕುಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಕರಾವಳಿ ಯುವಕ ಮಂಡಲವು ಹೈಕೋರ್ಟ್ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ಸಮರ್ಥಿಸಿಕೊಂಡಿದ್ದಾರೆ. ಮತ್ತೊಂದೆಡೆ, ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಅವರು ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಕ್ರಮಕ್ಕೆ ಸೂಚಿಸಿದ್ದರೂ, ಆಯುಕ್ತರು ಕಾನೂನು ಪಾಲನೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









