ಮಂಗಳೂರು : ಮಧ್ಯಪ್ರಾಚ್ಯ ರಾಷ್ಟ್ರಗಳಾದ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧದ ಜಾಗತಿಕ ಪರಿಣಾಮ ಇದೀಗ ಮಂಗಳೂರಿನ ಆಟೋ ರಿಕ್ಷಾ ಚಾಲಕರ ಬದುಕಿನ ಮೇಲೆ ಗಂಭೀರ ಹೊಡೆತ ನೀಡಿದೆ. ನಗರದ ಬಹುತೇಕ ಪೆಟ್ರೋಲ್ ಬಂಕ್ಗಳಲ್ಲಿ ಅಟೋ ಎಲ್ಪಿಜಿ (Auto LPG) ದಾಸ್ತಾನು ಖಾಲಿಯಾಗಿರುವುದರಿಂದ, ಚಾಲಕರು ಇಂಧನಕ್ಕಾಗಿ ಪರದಾಡುವಂತಾಗಿದೆ. ನಗರದಾದ್ಯಂತ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಸಾವಿರಾರು ಚಾಲಕರ ದೈನಂದಿನ ಆದಾಯಕ್ಕೆ ಕುತ್ತು ತಂದಿದೆ.
ನಗರದ ಬಹುಪಾಲು ಬಂಕ್ಗಳಲ್ಲಿ ‘ನೋ ಸ್ಟಾಕ್’ ಬೋರ್ಡ್ಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ಬೆಂದೂರ್ವೆಲ್ನ ಸೈಂಟ್ ಆಗ್ನೆಸ್ ಕಾಲೇಜು ಸಮೀಪವಿರುವ ‘ಗೋ ಗ್ಯಾಸ್’ ಬಂಕ್ನಲ್ಲಿ ಮಾತ್ರ ಅನಿಲ ಲಭ್ಯವಿದ್ದ ಕಾರಣ, ಅಲ್ಲಿ ನೂರಾರು ಆಟೋಗಳು ರಸ್ತೆಯುದ್ದಕ್ಕೂ ಕಿಲೋಮೀಟರ್ಗಟ್ಟಲೆ ಸಾಲುಗಟ್ಟಿ ನಿಂತಿವೆ. ತಮ್ಮ ಬಾಡಿಗೆಯನ್ನು ಬಿಟ್ಟು ಚಾಲಕರು ಗಂಟೆಗಟ್ಟಲೆ ಬಿಸಿಲಿನಲ್ಲಿ ಕಾಯುವಂತಾಗಿದ್ದು, ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ.
ಬೆಳಿಗ್ಗೆಯಿಂದಲೇ ಗ್ಯಾಸ್ಗಾಗಿ ನಗರದ ಮೂಲೆ ಮೂಲೆ ಅಲೆಯುತ್ತಿರುವ ಚಾಲಕರು, ಸಿಗುವ ಅಲ್ಪ ಪ್ರಮಾಣದ ಅನಿಲಕ್ಕಾಗಿ ಕ್ಯೂ ನಿಂತು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಈ ಕುರಿತು ಅಳಲು ತೋಡಿಕೊಂಡಿರುವ ಆಟೋ ಚಾಲಕ ಜಗದೀಶ್ ಅವರು, “ಇಡೀ ದಿನ ಬಾಡಿಗೆ ಹೊಡೆದು ಜೀವನ ಸಾಗಿಸಬೇಕಾದ ನಾವು, ಕೇವಲ ಗ್ಯಾಸ್ ತುಂಬಿಸಿಕೊಳ್ಳಲು ಅರ್ಧ ದಿನ ಕಳೆಯುತ್ತಿದ್ದೇವೆ. ಇದರಿಂದ ದಿನದ ದುಡಿಮೆ ಶೂನ್ಯವಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳೂರು ನಗರದ ಸಾರಿಗೆ ವ್ಯವಸ್ಥೆಯಲ್ಲಿ ಆಟೋ ರಿಕ್ಷಾಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೆಚ್ಚಿನ ವಾಹನಗಳು ಗ್ಯಾಸ್ ಅವಲಂಬಿತವಾಗಿರುವುದರಿಂದ, ಈ ಇಂಧನ ಅಭಾವವು ಸಾರ್ವಜನಿಕ ಸಾರಿಗೆಯ ಮೇಲೆಯೂ ಪರಿಣಾಮ ಬೀರಲು ಶುರುವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಂಧನ ಕಂಪನಿಗಳು ಮಧ್ಯಪ್ರವೇಶಿಸಿ, ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ನಿರಂತರ ಗ್ಯಾಸ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಚಾಲಕ ಸಂಘಟನೆಗಳು ಒತ್ತಾಯಿಸಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









