ಮಂಗಳೂರು : ಡಿ ಡಿ ಪ್ರೊಡಕ್ಷನ್ ಲಾಂಛನದಲ್ಲಿ ಡೋಲ್ಪಿ ಡಿ ಸೋಜ ಅವರ ನಿರ್ಮಾಣ ಹಾಗೂ ರಂಜಿತ್ ಸಿ ಬಜಾಲ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ “90 ಎಮ್ ಎಲ್” ತುಳು ಚಿತ್ರವು ಶುಕ್ರವಾರ ಮಂಗಳೂರಿನ ಭಾರತ್ ಸಿನಿಮಾಸ್ನಲ್ಲಿ ವಿಧ್ಯುಕ್ತವಾಗಿ ಚಾಲನೆ ಪಡೆಯಿತು. ಬೆಂಜನಪದವು ಕೊರಗಜ್ಜ ಕ್ಷೇತ್ರದ ವಿಜಯ ಅವರು ದೀಪ ಬೆಳಗಿಸಿ ಚಾಲನೆ ನೀಡಿ, ತುಳು ಚಿತ್ರರಂಗದಲ್ಲಿ ಸದಭಿರುಚಿಯ ಸಿನಿಮಾಗಳು ಬರುತ್ತಿರುವುದು ಸಂತಸದ ಸಂಗತಿಯಾಗಿದ್ದು, ಈ ಚಿತ್ರವು ಜನರ ಮನ ಗೆಲ್ಲಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಕಾಶ್ ಪಾಂಡೇಶ್ವರ್ ಅವರು ಚಿತ್ರದ ಟ್ರೈಲರ್ ಮಲಯಾಳಂ ಶೈಲಿಯಲ್ಲಿದ್ದು, ಶೀರ್ಷಿಕೆಯೂ ಕೂಡ ವಿಭಿನ್ನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಟ ಅರ್ಜುನ್ ದೇವ್ ಅವರು ಮಾತನಾಡಿ, ಶೀರ್ಷಿಕೆ ವಿಭಿನ್ನವಾಗಿದ್ದರೂ ಸಿನಿಮಾ ಎಲ್ಲರಿಗೂ ಹತ್ತಿರವಾಗಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಲಾಂಚುಲಾಲ್ ಕೆ.ಎಸ್. ಸೇರಿದಂತೆ ಚಿತ್ರದ ಪ್ರಮುಖರಾದ ಸ್ವರಾಜ್ ಶೆಟ್ಟಿ, ಸಿದ್ಧಾರ್ಥ್, ತ್ರಿಶೂಲ್ ಶೆಟ್ಟಿ ಮತ್ತು ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ವಿಜೆ ಮಧುರಾಜ್ ಅವರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಸಿನಿಮಾವು ಕರಾವಳಿಯ ವಿವಿಧ ಭಾಗಗಳಾದ ಮಂಗಳೂರು, ಉಡುಪಿ, ಪುತ್ತೂರು, ಬೆಳ್ತಂಗಡಿ ಹಾಗೂ ಸುರತ್ಕಲ್ ಸೇರಿದಂತೆ ಹಲವೆಡೆ ಏಕಕಾಲಕ್ಕೆ ತೆರೆಕಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸುಂದರ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದ್ದು, ವಿನೀತ್ ಕುಮಾರ್ ಮತ್ತು ರುಹಾನಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ತುಳು ಚಿತ್ರರಂಗದ ಖ್ಯಾತ ಹಾಸ್ಯ ನಟರಾದ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಉಮೇಶ್ ಮಿಜಾರ್ ಹಾಗೂ ದೀಪಕ್ ರೈ ಪಾಣಾಜೆ ಅವರ ತಾರಾಗಣವಿರುವುದು ಚಿತ್ರದ ವಿಶೇಷತೆಯಾಗಿದೆ. ರಂಜಿತ್ ಸಿ ಬಜಾಲ್ ಅವರ ಕಥೆ ಮತ್ತು ಚಿತ್ರಕಥೆ ಈ ಸಿನಿಮಾದ ಬೆನ್ನೆಲುಬಾಗಿದ್ದು, ಅರ್ಜುನ್ ಎಂವಿ ಅವರ ಛಾಯಾಗ್ರಾಹಣ ಹಾಗೂ ಸೃಜನ್ ಕುಮಾರ್ ತೋನ್ಸೆ ಅವರ ಸಂಗೀತ ಚಿತ್ರಕ್ಕಿದೆ. ಒಟ್ಟಾರೆಯಾಗಿ, ಈ ಸಿನಿಮಾವು ಉತ್ತಮ ಕಥೆಯೊಂದಿಗೆ ಹಾಸ್ಯ ಮನರಂಜನೆಯನ್ನು ಬಯಸುವ ಪ್ರೇಕ್ಷಕರಿಗೆ ರಸದೌತಣ ನೀಡಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









