ಮಂಗಳೂರು : ಜಿಲ್ಲೆಯಲ್ಲಿರುವ ಇ.ಎಸ್.ಐ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಲ್ಲಿ ರೋಗಿಗಳಿಗೆ ಎಲ್ಲ ರೀತಿಯ ಅಗತ್ಯ ಸೌಲಭ್ಯ ದೊರಕುವಂತೆ ಸುಸಜ್ಜಿತಗೊಳಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇ.ಎಸ್.ಐ. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಮತ್ತು ಅವರ ಕುಟುಂಬಸ್ಥರು ಇ.ಎಸ್.ಐ ಚಿಕಿತ್ಸೆಯನ್ನು ಅವಲಂಭಿಸಿರುತ್ತಾರೆ. ಈ ನಿಟ್ಟಿನಲ್ಲಿ ಅವರ ಆರೋಗ್ಯ ಚಿಕಿತ್ಸೆಗೆ ಯಾವುದೇ ಕೊರತೆಯಾಗದಂತೆ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರಕಿಸಲು ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.
ಇ.ಎಸ್.ಐ ಆಸ್ಪತ್ರೆಗಳೊಂದಿಗೆ ತಾಲೂಕು ಮತ್ತು ಜಿಲ್ಲಾ ಸರಕಾರಿ ಆಸ್ಪತ್ರೆಗಳನ್ನು ಪರಸ್ಪರ ಜೋಡಿಸಿ ಚಿಕಿತ್ಸೆ ಒದಗಿಸುವ ಸಂಬಂಧ ಆರೋಗ್ಯ ಇಲಾಖೆ ಹಾಗೂ ಇ.ಎಸ್.ಐ ಇಲಾಖೆ ನಡುವೆ ಒಪ್ಪಂದ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ಇ.ಎಸ್.ಐ.ಗೆ ಒಳಪಟ್ಟ ರೋಗಿಗಳು ತಾಲೂಕು ಮತ್ತು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು. ಮಂಗಳೂರು ಇ.ಎಸ್.ಐ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಚಿಕಿತ್ಸೆ, ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸೆ ದೊರಕುವಂತೆ ಮೇಲ್ದರ್ಜೆಗೇರಿಸಬೇಕು. ಈ ಬಗ್ಗೆ ಅಗತ್ಯ ಪ್ರಸ್ತಾವನೆ ಸಲ್ಲಿಸಬೇಕೆಂದು ಅವರ ಸೂಚಿಸಿದರು.
ಇ.ಎಸ್.ಐ ಆಯುಕ್ತ ಡಾ.ದಿನೇಶ್ ಮಾತನಾಡಿ, ಇ.ಎಸ್.ಐ ಮಂಗಳೂರು ಪ್ರಾದೇಶಿಕ ವಲಯದ ವ್ಯಾಪ್ತಿಗೆ ಬರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 1 ಆಸ್ಪತ್ರೆ ಹಾಗೂ 11ಚಿಕಿತ್ಸಾಲಯಗಳು ಕಾರ್ಯನಿರ್ವಹಿಸುತ್ತಿದೆ. ಸುಮಾರು 3.92 ಲಕ್ಷ ಇ.ಎಸ್.ಐ ನೋಂದಣಿಗಾರರು ಮತ್ತು ಅವರ 15 ಲಕ್ಷದಷ್ಟು ಕುಟುಂಬಸ್ಥರು ಇ.ಎಸ್.ಐ ಸೌಲಭ್ಯ ಪಡೆಯುತ್ತಿದ್ದಾರೆ. ಇದಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18 ಹಾಗೂ ಉಡುಪಿಯಲ್ಲಿ 11 ಖಾಸಗಿ ಆಸ್ಪತ್ರೆಗಳಲ್ಲಿ ಇ.ಎಸ್.ಐ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮಂಗಳೂರು ಇ.ಎಸ್.ಐ ಆಸ್ಪತ್ರೆಯನ್ನು 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ ಮಾಡಲಾಗುತ್ತಿದ್ದು, ಹೊಸದಾಗಿ ಐ.ಸಿ.ಯು, ಶಸ್ತ್ರಚಿಕಿತ್ಸೆ ಕೊಠಡಿ, ಪ್ರಯೋಗಾಲಯ, ಡಯಾಲಿಸಿಸ್ ಕೇಂದ್ರ ಸೇರಿದಂತೆ ಉನ್ನತ ಸೌಲಭ್ಯಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಹೆಚ್.ಆರ್ ತಿಮ್ಮಯ್ಯ, ವೆನ್ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್, ಇ.ಎಸ್.ಐ ನೋಡಲ್ ಅಧಿಕಾರಿ ಹೇಮಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









