ಮಂಗಳೂರು : ಸೌರಮಾನ ಯುಗಾದಿಯೆಂದು ಕರೆಯಲ್ಪಡುವ ವಿಷು ಹಬ್ಬವು ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗವಾದ ತುಳುನಾಡಿನಲ್ಲಿ ಅತ್ಯಂತ ಸಡಗರದಿಂದ ಆಚರಿಸಲಾಗುವ ಹೊಸ ವರ್ಷವಾಗಿದೆ. ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುವ ಮೇಷ ಮಾಸದ ಮೊದಲ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. 2026ರಲ್ಲಿ ಈ ಸಂಭ್ರಮವು ಏಪ್ರಿಲ್ 15, ಬುಧವಾರದಂದು ಬಂದಿದ್ದು, ಜನರು ಹೊಸ ಆಸೆಗಳೊಂದಿಗೆ ವರ್ಷದ ಆರಂಭವನ್ನು ಬರಮಾಡಿಕೊಳ್ಳುತ್ತಿದ್ದಾರೆ.
ಈ ಹಬ್ಬದ ಅತ್ಯಂತ ಪ್ರಮುಖ ಮತ್ತು ಪವಿತ್ರವಾದ ಆಚರಣೆಯೆಂದರೆ ‘ವಿಷು ಕಣಿ’. ಹಬ್ಬದ ಹಿಂದಿನ ರಾತ್ರಿಯೇ ಮನೆಯ ಹಿರಿಯರು ಒಂದು ತಾಮ್ರದ ಪಾತ್ರೆಯಲ್ಲಿ (ಉರುಳಿ) ಅಕ್ಕಿ, ಕಣಿ ಕೊನ್ನ ಹೂವು, ಕನ್ನಡಿ, ಹೊಸ ಬಟ್ಟೆ, ಬಂಗಾರ, ನಾಣ್ಯಗಳು ಹಾಗೂ ವಿವಿಧ ಹಣ್ಣು-ಹಂಪಲುಗಳನ್ನು ಜೋಡಿಸಿ ದೀಪ ಬೆಳಗಿ ಸಿದ್ಧಪಡಿಸುತ್ತಾರೆ. ವಿಷುವಿನ ದಿನ ಬೆಳಿಗ್ಗೆ ಬೇಗ ಎದ್ದು ಕಣ್ಮುಚ್ಚಿ ಬಂದು ಮೊದಲು ಈ ಶುಭ ವಸ್ತುಗಳನ್ನು ನೋಡುವುದರಿಂದ ವರ್ಷವಿಡೀ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬ ಬಲವಾದ ನಂಬಿಕೆ ಜನಪದದಲ್ಲಿದೆ.
ಕಟುಂಬದ ಹಿರಿಯರು ಕಿರಿಯರಿಗೆ ಹಣ ಅಥವಾ ಉಡುಗೊರೆಗಳನ್ನು ನೀಡಿ ಆಶೀರ್ವದಿಸುವ ‘ವಿಷು ಕೈನೀಟ್ಟಂ’ ಸಂಪ್ರದಾಯವು ಈ ಹಬ್ಬದ ಮತ್ತೊಂದು ಆಕರ್ಷಣೆ. ಇದರೊಂದಿಗೆ ಹಬ್ಬದ ವಿಶೇಷ ಭಕ್ಷ್ಯಗಳನ್ನೊಳಗೊಂಡ ‘ವಿಷು ಸದ್ಯ’ದ ಸವಿ ಹಾಗೂ ಪಟಾಕಿಗಳ ಸದ್ದು ಹಬ್ಬದ ಕಳೆಯನ್ನು ಹೆಚ್ಚಿಸುತ್ತದೆ. ಜನರು ಹೊಸ ಬಟ್ಟೆಗಳನ್ನು ಧರಿಸಿ, ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸುಗ್ಗಿಯ ಕಾಲ ಮತ್ತು ಹೊಸ ಆರಂಭವನ್ನು ಸಂಭ್ರಮಿಸುತ್ತಾರೆ.
ರೂಪದರ್ಶಿ : ಜ್ಯೋತಿ ಶೆಟ್ಟಿ
ಛಾಯಾಗ್ರಹಣ : ಭಾಸ್ಕರ ಅಮ್ಟೂರು
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









