ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಕೇಂದ್ರ ಸರ್ಕಾರದ ವೈಫಲ್ಯ ಹಾಗೂ ಅಡುಗೆ ಅನಿಲ ಬೆಲೆ ಏರಿಕೆಯನ್ನು ಖಂಡಿಸಿ ಮಂಗಳೂರಿನ ಕದ್ರಿ ಸರ್ಕಲ್ ಬಳಿ ಬುಧವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾಕಾರರು ಖಾಲಿ ಗ್ಯಾಸ್ ಸಿಲಿಂಡರ್ಗೆ ಹೂಮಾಲೆ ಹಾಕಿ, ಅದನ್ನು ಚಟ್ಟದ ಮೇಲೆ ಕಟ್ಟಿ ಅಣಕು ಶವಯಾತ್ರೆ ನಡೆಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಅಲ್ಲದೆ, ಗ್ಯಾಸ್ ಸ್ಟವ್ ಮತ್ತು ಖಾಲಿ ಪಾತ್ರೆಗಳನ್ನು ಪ್ರದರ್ಶಿಸಿ ಕೇಂದ್ರ ಸರ್ಕಾರದ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ರಮಾನಾಥ ರೈ ಅವರು ಮಾತನಾಡಿ, ಕೇಂದ್ರ ಸರ್ಕಾರದ ಅಸ್ಪಷ್ಟ ವಿದೇಶಾಂಗ ನೀತಿ ಮತ್ತು ಆಡಳಿತಾತ್ಮಕ ವೈಫಲ್ಯದಿಂದಾಗಿ ದೇಶದಲ್ಲಿ ಇಂದು ಅಡುಗೆ ಅನಿಲ ಪೂರೈಕೆ ಅಸ್ತವ್ಯಸ್ತಗೊಂಡಿದೆ ಎಂದು ಆರೋಪಿಸಿದರು. ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಆರ್ಥಿಕವಾಗಿ ಕಂಗಾಲಾಗಿದ್ದರೂ, ಬಿಜೆಪಿ ನಾಯಕರು ಸುಳ್ಳು ಹೇಳುತ್ತಾ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಪ್ರಧಾನಿಯವರು ಬೆಲೆ ಏರಿಕೆಯನ್ನು ನಿಯಂತ್ರಿಸುವ ಬದಲು ಜನರನ್ನು ವಂಚಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಮಾತನಾಡಿ, ಕಾಳಸಂತೆಯಲ್ಲಿ ಅಡುಗೆ ಅನಿಲದ ಬೆಲೆ ಗಗನಕ್ಕೇರಿದ್ದು, ಇದು ಹೋಟೆಲ್ ಉದ್ಯಮ ಮತ್ತು ಸಾರಿಗೆ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಆತಂಕ ವ್ಯಕ್ತಪಡಿಸಿದರು. ಆಟೋ ರಿಕ್ಷಾಗಳಿಗೆ ಎಲ್ಪಿಜಿ ಲಭ್ಯವಾಗದೆ ಚಾಲಕರು ಪರದಾಡುತ್ತಿದ್ದು, ತಿಂಡಿ-ತಿನಿಸುಗಳ ದರವೂ ಏರಿಕೆಯಾಗಿದೆ. ನರೇಂದ್ರ ಮೋದಿ ಅವರು ದೇಶದ ದುರ್ಬಲ ಪ್ರಧಾನಿ ಎಂಬುದಕ್ಕೆ ಇಂದಿನ ಈ ಆರ್ಥಿಕ ಅರಾಜಕತೆಯೇ ಸಾಕ್ಷಿ ಎಂದು ಅವರು ದೂರಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









