ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೋಮಂತಡ್ಕ ಸಮೀಪದ ಅಗರಿ ಕ್ರಾಸ್ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವ ಫೋಟೋಗ್ರಾಫರ್ ಗಣೇಶ್ ಗೌಡ (36) ಅವರು ಮೇ 25ರ ಸೋಮವಾರದಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕಳೆಂಜ ಗ್ರಾಮದ ನಿವಾಸಿ ನೋಣಯ್ಯ ಗೌಡ ಅವರ ಪುತ್ರರಾಗಿರುವ ಮೃತ ಗಣೇಶ್ ಗೌಡ, ಕಾಯರ್ತಡ್ಕ ಜಂಕ್ಷನ್ನಲ್ಲಿ ‘ಗಣೇಶ್ ಸ್ಟುಡಿಯೋ’ ನಡೆಸ್ತಾ ಇದ್ದು, ಸ್ಥಳೀಯವಾಗಿ ವೀಡಿಯೋಗ್ರಾಫರ್ ಆಗಿಯೂ ಗುರುತಿಸಿಕೊಂಡಿದ್ದರು.
ಕಳೆದ ಮೇ 24ರ ಭಾನುವಾರದಂದು ಗಣೇಶ್ ಅವರು ಉಜಿರೆಯಿಂದ ಕಕ್ಕಿಂಜೆ ಮಾರ್ಗವಾಗಿ ತಮ್ಮ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ, ಎದುರಿನಿಂದ ವೇಗವಾಗಿ ಬಂದ ಕಾರು ಇವರ ಬೈಕ್ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಇವರ ತಲೆ ಹಾಗೂ ದೇಹಕ್ಕೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿತ್ತು. ತಕ್ಷಣವೇ ಅವರನ್ನು ರಕ್ಷಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಲಾಗಿತ್ತಾದರೂ, ಮರುದಿನವೇ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಈ ಅಪಘಾತಕ್ಕೆ ಸಂಬಂಧಿಸಿದಂತೆ ಕಾಯರ್ತಡ್ಕದ ಯುವ ಉದ್ಯಮಿಯ ಅಕಾಲಿಕ ನಿಧನಕ್ಕೆ ಸ್ಥಳೀಯರು ಕಂಬನಿ ಮಿಡಿದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









