ಮಂಗಳೂರು : ನಗರದ ಪದವು ಗ್ರಾಮದ ಜೋಡುಕಟ್ಟೆ ಮರೋಳಿ ಎಂಬ ಪ್ರದೇಶದ ಬಳಿ ಜೂನ್ 11 ರಂದು ಕಾನೂನುಬಾಹಿರವಾಗಿ ಆನೆದಂತಗಳನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಜಾಲವೊಂದನ್ನು ಭೇದಿಸಲಾಗಿದೆ. ಈ ಅಕ್ರಮ ದಂಧೆಯಲ್ಲಿ ತೊಡಗಿದ್ದ ಬೆಳ್ತಂಗಡಿಯ ಶಶಾಂಕ ಪುದುವೆಟ್ಟು, ಮಂಜೇಶ್ವರದ ಅಬ್ದುಲ್ ಖಾದರ್ ಮತ್ತು ಅತ್ತಾವರದ ಪ್ರಭಾಚಂದ್ರ ಎಂಬ ಮೂವರು ಆರೋಪಿಗಳನ್ನು ಅಧಿಕಾರಿಗಳು ಸ್ಥಳದಲ್ಲೇ ಬಂಧಿಸಿದ್ದಾರೆ. ಬಂಧಿತರಿಂದ ಅಕ್ರಮ ಸಾಗಾಟಕ್ಕೆ ಬಳಸಲಾಗಿದ್ದ ಎರಡು ಐಷಾರಾಮಿ ಕಾರುಗಳು ಹಾಗೂ ಸುಮಾರು 42.700 ಕಿಲೋ ಗ್ರಾಂ ತೂಕದ ಎರಡು ಬೃಹತ್ ಆನೆದಂತಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ನಡೆದ ಈ ಕಾರ್ಯಾಚರಣೆಯು ಬೆಂಗಳೂರು ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಪವನ್ ನೆಜ್ಜೂರು (ಐಪಿಎಸ್) ಅವರ ಪ್ರತ್ಯೇಕ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿದೆ. ಮಂಗಳೂರು ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕರಾದ ದಿಲೀಪ್ ಜಿ.ಆರ್ ನೇತೃತ್ವ ವಹಿಸಿದ್ದ ಈ ದಾಳಿಯಲ್ಲಿ, ಸಿಬ್ಬಂದಿಗಳಾದ ಜಯರಾಮ ಕೆ.ಟಿ, ಬಾಲಕೃಷ್ಣ ಕೆ.ಎಂ, ತಾರನಾಥ ಎಸ್ ಮತ್ತು ಅಬ್ದುಲ್ ರವೂಫ್ ಅವರು ಪಾಲ್ಗೊಂಡು ಕಳ್ಳಸಾಗಣೆದಾರರನ್ನು ಹೆಡೆಮುರಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಅಪರಾಧ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









