ಮಂಗಳೂರು : ಸಮುದ್ರ ಮಟ್ಟದಿಂದ 1500 ಅಡಿ ಎತ್ತರದಲ್ಲಿರುವ ಕಾರಿಂಜೇಶ್ವರ ದೇವಸ್ಥಾನ ಭೂ ಕೈಲಾಸವೆಂದೇ ಪ್ರಸಿದ್ದಿ ಪಡೆದಿದೆ. ನಾಲ್ಕು ಯುಗಗಳಲ್ಲಿ ವಿವಿಧ ಹೆಸರುಗಳಿಂದ ಈ ಕ್ಷೇತ್ರ ಪ್ರತೀತಿಯನ್ನು ಹೊಂದಿದೆ. ಈಗಿನ ಕಾರಿಂಜ ಬೆಟ್ಟ ಕೃತ ಯುಗದಲ್ಲಿ ರೌದ್ರಗಿರಿ, ತ್ರೇತಾ ಯುಗದಲ್ಲಿ ಗಜೇಂದ್ರಗಿರಿ, ದ್ವಾಪರದಲ್ಲಿ ಭೀಮಶೈಲವೆಂದು ಕರೆಯುತ್ತಿದ್ದರೆಂಬ ಐತಿಹ್ಯವಿದೆ. ಇಡೀ ಬೆಟ್ಟ ಪ್ರದೇಶ ಸುಮಾರು 53 ಎಕರೆ ವ್ಯಾಪಿಸಿದೆ. ಇಡೀ ಕ್ಷೇತ್ರವನ್ನು ಕೊಡ್ಯಮಲೆಯ ದಟ್ಟ ಅರಣ್ಯ ಆವರಿಸಿಕೊಂಡಿದೆ.
ಕಾರಿಂಜ ಬೆಟ್ಟವು ದೂರದಿಂದ ವೀಕ್ಷಿಸಿದಾಗ ಏಕಶಿಲಾ ಬೆಟ್ಟದಂತೆ ಭಾಸವಾಗುತ್ತದೆ. ಶಿವನಿಗೂ, ಪಾರ್ವತಿಗೂ ಪ್ರತ್ಯೇಕ ದೇವಸ್ಥಾನವಿರುವುದು ಇಲ್ಲಿನ ವೈಶಿಷ್ಟ್ಯ. ಗುಡ್ಡದ ನಡುವೆ ಪಾರ್ವತಿ ಹಾಗೂ ಗುಡ್ಡದ ತುತ್ತ ತುದಿಯಲ್ಲಿ ಶಿವನಿಗೆ ಶಿಲಾಮಯ ಗರ್ಭಗುಡಿಯಿದೆ.
ಬೆಟ್ಟದ ತುದಿಯ ಶಿವ ದೇವಸ್ಥಾನದಿಂದ ನಾಲ್ಲೂ ದಿಕ್ಕಿನಲ್ಲಿ ಹಚ್ಚ ಹಸಿರು ದೃಶ್ಯ ವೈಭವ ಕಾಣಬಹುದು. ಇಲ್ಲಿಂದ ಕೆಳಗಿನ ಬೃಹತ್ ಶಿಲಾಬೆಟ್ಟದತ್ತ ಕೂಗಿಕೊಂಡರೆ ಸ್ಪಷ್ಟ ಪ್ರತಿಧ್ವನಿ ನೀಡುವ ಪ್ರತಿಧ್ವನಿ ಕಲ್ಲು ಇದೆ. ಸತ್ಯ ಪ್ರಮಾಣ ಮಾಡುತ್ತಿದ್ದ ಸೀತಾದೇವಿ ಪ್ರಮಾಣ ಕಲ್ಲು ಇದೆ. ವಾನರರಿಗೆ ಆಹಾರ ನೀಡುವ ಪ್ರಾಚೀನ ಪದ್ಧತಿಯನ್ನು ದೇವಾಲಯದ ಒಳಗೆ ಇಂದಿಗೂ ಅನುಸರಿಸಲಾಗುತ್ತಿದೆ.
ಕೃತಯುಗದಲ್ಲಿ, ಋಷಿ ಮುನಿಗಳು ಈ ಸ್ಥಳದಲ್ಲಿ ತಪಸ್ಸು ಮಾಡಿ ದೇವರನ್ನು ಪೂಜಿಸುತ್ತಿದ್ದರು. ಅಕಾಲದಲ್ಲಿ ಸತ್ಯ ಹರಿಶ್ಚಂದ್ರ ದೇವಾಲಯ ನಿರ್ಮಿಸಿದ, ತ್ರೇತಾಯುಗದಲ್ಲಿ ರಾಮ ಮತ್ತು ಸೀತೆ ಇಲ್ಲಿಗೆ ಭೇಟಿ ನೀಡಿದ್ದರು. “ಸೀತಾ ಪ್ರಮಾಣ ಕಲ್ಲು” ಎಂದು ಕರೆಯಲ್ಪಡುವ ಎರಡು ಕಲ್ಲು ಇದಕ್ಕೆ ಪುರಾವೆಯಾಗಿ ಕಾಣ ಸಿಗುತ್ತದೆ ಆಗ ದಿಲೀಪ ರಾಜ ಈ ದೇವಸ್ಥಾನ ಪುನರ್ ನಿರ್ಮಾಣ ಮಾಡಿದ. ದ್ವಾಪರಯುಗದಲ್ಲಿ, ಶ್ರೀ ಕೃಷ್ಣ ಮತ್ತು ಪಾಂಡವರು ಈ ಪ್ರದೇಶಕ್ಕೆ ಭೇಟಿ ನೀಡಿದರು, ಆಗ ಭೀಮಸೇನ ದೇವಾಲಯ ಕಟ್ಟಿದ . ಅಂತಿಮವಾಗಿ, ಕಲಿಯುಗದಲ್ಲಿ ಏಕಲ ಎಂಬ ಬೇಡರ ರಾಜ ದೇವಸ್ಥಾನ ನಿರ್ಮಿಸಿದ ಎಂಬ ಐತಿಹ್ಯವಿದೆ, ಬೇಡರ ಮಹಿಳೆ ಗುಡ್ಡದ ಮೇಲೆ ಕತ್ತಿಯಿಂದ ಅಗೆಯುವಾಗ ಕಲ್ಲಿನಿಂದ ರಕ್ತ ಬಂತು, ತನ್ನ ಮಗನ ನೆನಪಾಗಿ ಕಾರಿಂಜ ಎಂದು ಕೂಗಿದಳಂತೆ ಮುಂದೆ ಅದು ಶ್ರೀ ಕಾರಿಂಜೇಶ್ವರ ಎಂದು ಪ್ರಸಿದ್ದಿಯನ್ನು ಪಡೆಯಿತು ಎಂಬ ಕಥೆಗಳಿವೆ.
ದ್ವಾಪರ ಯುಗದಲ್ಲಿ ಪಾಂಡವರು ಇಲ್ಲಿಗೆ ಬಂದಾಗ ಭೀಮನು ತನ್ನ ಗಧೆಯನ್ನು ನೆಲದ ಮೇಲೆ ಎಸೆದನು ಮತ್ತು ಅಲ್ಲಿ ಒಂದು ಕೊಳವು ರೂಪುಗೊಂಡಿತು ಎಂದು ನಂಬಲಾಗಿದೆ, ಈ ಕೊಳವನ್ನು ‘ಗಧಾ ತೀರ್ಥ’ ಎಂದು ಕರೆಯಲಾಗುತ್ತದೆ. ಇದಲ್ಲದೆ, ಭೀಮನ ಹೆಬ್ಬೆರಳಿನಿಂದ ‘ಉಂಗುಷ್ಟ ತೀರ್ಥ’ ರಚಿಸಲ್ಪಟ್ಟಿತು ಮತ್ತು ಅವನು ನೆಲದ ಮೇಲೆ ಮಂಡಿಯೂರಿದಾಗ, ‘ಜನು ತೀರ್ಥ’ ಎಂಬ ಮತ್ತೊಂದು ಕೊಳವನ್ನು ರಚಿಸಲ್ಪಟ್ಟಿತು. ‘ಹಂದಿ ಕೆರೆ’ ಹೆಸರಿನ ಮತ್ತೊಂದು ಕೊಳವನ್ನು ಇಲ್ಲಿ ಕಾಣಬಹುದು, ಮಹಾನ್ ಯೋಧ ಅರ್ಜುನನು ಹಂದಿಗೆ ಬಾಣ ಹೊಡೆದಾಗ ಇದು ರೂಪುಗೊಂಡಿದೆ ಎಂದು ನಂಬಲಾಗಿದೆ. ವರ್ಷದ ಎಲ್ಲಾ ದಿನ ಬೆಟ್ಟದ ತುದಿಯಲ್ಲಿರುವ ಈ ಕೆರೆಗಳಲ್ಲಿ ನೀರು ಬತ್ತದಿರುವುದು ವಿಶೇಷ.
ಈ ದೇವಾಲಯವನ್ನು ತಲುಪಲು ಸುಮಾರು 500 ಕ್ಕಿಂತಲೂ ಹೆಚ್ಚು ಮೆಟ್ಟಿಲುಗಳಿವೆ. ಶಿವ ದೇವಾಲಯವನ್ನು ಜೈನ ಹಾಗೂ ವೈಷ್ಣವ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಪಾರ್ವತಿ ದರ್ಶನದ ನಂತರ ತೀರಾ ಕಡಿದಾದ ಸುಸಜ್ಜಿತ ಮೆಟ್ಟಿಲುಗಳನ್ನು ಹತ್ತಿ ಹೋದರೆ ಅಲ್ಲಿ ’ಉಕ್ಕಡದ ಬಾಗಿಲು’ ಕಾಣಸಿಗುತ್ತದೆ. ಇದು ಕಲ್ಲಿನಿಂದ ಮಾಡಿದ ದ್ವಾರವಾಗಿದ್ದು, ಅಲ್ಲಿಂದ ಮುಂದಕ್ಕೆ ಬಂಡೆ ಹಾಗೂ ಕುರುಚಲು ಮರ-ಗಿಡಗಳ ನಡುವೆ ಸುಮಾರು 300 ಮೆಟ್ಟಿಲುಗಳನ್ನು ಹತ್ತುತ್ತಾ ಸಾಗಿದರೆ ಬೆಟ್ಟದ ತುದಿಯಲ್ಲಿದೆ ಶಿವ ದೇವಸ್ಥಾನ.
ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಒಂದು ಪ್ರಮುಖ ಹಬ್ಬವಾಗಿದೆ. ಶಿವರಾತ್ರಿ ದಿನದಂದು ದಿನ ಪೂರ್ತಿ ಪೂಜೆಗಳನ್ನು ನಡೆಸಲಾಗುತ್ತದೆ . ಹಬ್ಬವನ್ನು ನಾಲ್ಕು ದಿನಗಳವರೆಗೆ ಆಚರಿಸಲಾಗುತ್ತದೆ. ಎರಡನೇ ದಿನ ಗುಡ್ಡದ ಮೇಲಿನಿಂದ ಶಿವನ ವಿಗ್ರಹವನ್ನು ಪಾರ್ವತಿಯ ದೇವಾಲಯಕ್ಕೆ ತರುವ ಮೂಲಕ ಶಿವ ಪಾರ್ವತಿಯರ ಭೇಟಿ ನಡೆಯುತ್ತದೆ.
ಮೂರನೇ ದಿನ ರಥೋತ್ಸವ ನಡೆಯುತ್ತದೆ. ಈ ದಿನ, ವಿಗ್ರಹಗಳನ್ನು ದೇವಾಲಯದ ಸುತ್ತಲೂ ಮೆರವಣಿಗೆಯಲ್ಲಿ ಸಾಗಿಸಿ ನಂತರ ರಥದಲ್ಲಿ ಕುಳ್ಳಿರಿಸಲಾಗುತ್ತದೆ. ಮತ್ತೆ ನಾಲ್ಕನೇ ದಿನ ಶಿವನ ವಿಗ್ರಹವನ್ನು ಪಾರ್ವತಿ ದೇವಿಯಲ್ಲಿಗೆ ಕೊಂಡೊಯ್ಯಲಾಗುತ್ತದೆ.
ಪೌರಾಣಿಕ ಹಿನ್ನೆಲೆಯ ಪ್ರಕಾರ ಶಿವನು ಪಾರ್ವತಿ ದೇವಿಯ ಸಂಗವನ್ನು ಬಯಸಿ ಬೆಟ್ಟದಿಂದ ಕೆಳಗೆ ಇಳಿದು ಬರುತ್ತಾನೆ. ಆದರೆ ಕೆಳಗೆ ಬಂದು ತಲುಪಿದಾಗ ಪಾರ್ವತಿಯು ಋತುಮತಿಯಾಗಿರುವುದನ್ನು ತಿಳಿದು, ವೇಗವಾಗಿಯೇ ಕಡಿದಾದ ಬೆಟ್ಟವನ್ನು ಏರುತ್ತಾನೆ. ಹೀಗಾಗಿ ಇಂದಿಗೂ ಕೂಡಾ ಉತ್ಸವದ ಸಮಯದಲ್ಲಿ ಅರ್ಚಕರು ಶಿವನ ವಿಗ್ರಹವನ್ನು ಕೆಳಗೆ ತಂದು ಅಷ್ಟೇ ವೇಗವಾಗಿ ಓಡಿಕೊಂಡು ಬೆಟ್ಟವನ್ನು ಏರುತ್ತಾರೆ. ಅರ್ಚಕರು ಓಡಿಕೊಂಡೇ ಬೆಟ್ಟವನ್ನು ಏರುವಂತಹ ಸನ್ನಿವೇಶವು ಈ ಸ್ಥಳದ ಪವಾಡ ಶಕ್ತಿಯಾದ ಶಿವನ ಪ್ರಭಾವವನ್ನು ತಿಳಿಸುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳ ಮೂಡೂರು ಗ್ರಾಮದಲ್ಲಿರುವ ಕಾರಿಂಜ ಬೆಟ್ಟದ ಕಾರಿಂಜೇಶ್ವರ ದೇವಸ್ಥಾನ ಹಳೆಯ ಶೈಲಿಯಲ್ಲಿಯೇ ಇದೆ. ಬೆಟ್ಟಕ್ಕೆ ತಾಗಿಕೊಂಡೇ ಮರಿ ಪಾದೆ, ಪಿಲಿ ಪದೆಗಳೆಂಬ ಎರಡು ಬಂಡೆಗಳೂ ಇವೆ. ಪಾರ್ವತೀ ದೇವಾಲಯದ ಉಕ್ಕಡದ ಬಾಗಿಲಿನ ಮೇಲಿನ ಮೆಟ್ಟಿಲುಗಳು ತುತ್ತ ತುದಿಯಲ್ಲಿರುವ ಶಿವಾಲಯ ಇನ್ನೂ ಅದು ಅಭಿವೃದ್ಧಿಯ ಹಂತದಲ್ಲಿದೆ.
ಲೇಖನ : ಶಿವಪ್ರಸಾದ್ ತೌಡುಗೋಳಿ

ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಹಬ್ಬಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು