ಪುತ್ತೂರು : ನವೆಂಬರ್ ತಿಂಗಳೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಖಚಿತ ಎಂದು ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಅವರು ಕಡಬ ತಾಲೂಕಿನ ಸವಣೂರಿನ ಆರೇಲ್ತಡಿ ದೈವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಜನಾರ್ಧನ ರೆಡ್ಡಿ ನವಂಬರ್ ತಿಂಗಳೊಳಗಾಗಿ ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಬಗ್ಗೆ ಮಾತುಕತೆ ಹಿಂದೆಯೇ ನಡೆದಿದೆ. ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೂ ಇದೇ ವಿಚಾರವನ್ನು ಸಿದ್ಧರಾಮಯ್ಯ ತಿಳಿಸಿದ್ದಾರೆ. ದೇವರಾಜ ಅರಸ್ ಆಡಳಿತದ ಅವಧಿಗಿಂತ ಒಂದು ದಿನದ ವರೆಗೆ ಅಧಿಕಾರ ಮಾಡಬೇಕು ಎನ್ನೋದು ಸಿದ್ಧರಾಮಯ್ಯರ ಆಸೆ. ಆ ಬಳಿಕ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುತ್ತೇವೆ ಎಂದು ಹೈಕಮಾಂಡ್ ಗೆ ಮಾತು ನೀಡಿದ್ದರು. ಈ ವಿಚಾರವನ್ನು ನಾನು ಸಂಡೂರು ಉಪ ಚುನಾವಣೆಯ ಸಂದರ್ಭದಲ್ಲಿ ಹೇಳಿದ್ದೇನೆ. ಅಧಿಕಾರ ಹಂಚಿಕೆಯನ್ನು 50-50 ಮಾದರಿಯಲ್ಲಿ ಮಾಡಿಕೊಂಡಿದ್ದಾರೆ.
ಆ ಕಾರಣಕ್ಕಾಗಿಯೇ ಡಿ.ಕೆ.ಶಿವಕುಮಾರ್ ಅದಕ್ಕೆ ಬುನಾದಿ ಹಾಕಲು ಶುರು ಮಾಡಿದ್ದಾರೆ. ಆ ಕಾರಣಕ್ಕಾಗಿ ದೇವರಾಜ ಅರಸರ ಆಡಳಿತ ಅವಧಿ ಮೀರಿದ ತಕ್ಷಣವೇ ಸಿದ್ಧರಾಮಯ್ಯ ಅಧಿಕಾರ ಬಿಟ್ಟುಕೊಡುವ ಸಾಧ್ಯತೆಯಿದೆ. ಇಲ್ಲದೇ ಹೋದಲ್ಲಿ ಡಿ.ಕೆ.ಶಿ ಬಲವಂತವಾಗಿ ಮುಖ್ಯಮಂತ್ರಿ ಕುರ್ಚಿ ಎಳೆದು ಕುಳಿತುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ, ಡಿಕೆಶಿ ಅಧಿಕಾರ ಪಡೆಯಲೇಬೇಕೆಂಬ ಆತುರದಲ್ಲಿದ್ದಾರೆ ಎಂದು ಗಾಲಿ ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಈ ವೇಳೆ ಜನಾರ್ದನ ರೆಡ್ಡಿ ಜೊತೆ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಇದ್ದರು.

ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು