ಪುತ್ತೂರು: ಖಾಸಗಿ ಬಡ್ಡಿ ಲೇವಾದೇವಿಯೊಬ್ಬರಿಂದ ಸಾಲ ಪಡೆದು ದುಪ್ಪಟ್ಟು ಹಣ ಪಾವತಿಸಿದರೂ ಹಣ ನೀಡುವಂತೆ ಪೀಡಿಸುತ್ತಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ದಾಖಲಿಸದೆ ಅನ್ಯಾಯ ಎಸಗಿದ್ದಾರೆ ಎಂದು ಪುತ್ತೂರು ತಾಲೂಕಿನ ಕೊಡಿಪ್ಪಾಡಿ ನಿವಾಸಿ ಅಟೋ ಚಾಲಕ ಚಂದ್ರಶೇಖರ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಅನಿವಾರ್ಯ ಕಾರಣಕ್ಕಾಗಿ ಲೇವಾದೇವಿದಾರರೊಬ್ಬರಿಂದ ರು. 20 ಸಾವಿರ ಸಾಲ ಪಡೆದಿದ್ದೆ. ಇದಕ್ಕೆ ತಲಾ ರು. 2 ಸಾವಿರದಂತೆ 20 ಮಾಸಿಕ ಕಂತುಗಳಲ್ಲಿ ಪಾವತಿಸಿ ಸಂದಾಯ ಮಾಡಿದ್ದೆ. ಆದರೆ ಆ ಬಳಿಕವೂ ಆತ ಮೊಬೈಲ್‌ಗೆ ಕರೆ ಮಾಡಿ ಹಣ ನೀಡುವಂತೆ ಜೀವ ಬೆದರಿಕೆ ಒಡ್ಡುತ್ತಿದ್ದರು. ಆತ ಬೈದಿರುವ ಬಗ್ಗೆ ತಾನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಟ್ಟಿದ್ದು, ಆ ದಾಖಲೆಯೊಂದಿಗೆ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದೆ. ಆದರೆ ಪೊಲೀಸರು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಲಿಂಗಪ್ಪ ಕೆ. ಇದ್ದರು.
ಹಿಂಸೆ ಕಣ್ಣೀರಿಗೆ ಕಾರಣ: ಖಾಝಿ
ಮಂಗಳೂರು: ಉಳ್ಳಾಲ ಪರಿಸರದಲ್ಲಿ ನಡೆಯುತ್ತಿರುವ ಅಹಿತಕರ ಘಟನೆ ಖಂಡನಾರ್ಹ. ಯಾರೂ ಪ್ರಚೋದಿತರಾಗಿ ಹಿಂಸಾ ಕೃತ್ಯಗಳಿಗೆ ಇಳಿಯಬಾರದು. ಹಿಂಸೆಯಿಂದ ಯಾವ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ, ಕಣ್ಣೀರಿಗಷ್ಟೇ ಕಾರಣ ಆಗಬಲ್ಲದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಹೇಳಿದ್ದಾರೆ.
ಉಪ್ಪಿನಂಗಡಿಯಲ್ಲಿ ಪೊಲೀಸ್ ತುಕಡಿ
ಉಪ್ಪಿನಂಗಡಿ: ಉಳ್ಳಾಲ- ಕಲ್ಲಡ್ಕ ಪ್ರದೇಶದಲ್ಲಿ ಕೋಮು ಉದ್ವಿಗ್ನತೆ ಹಿನ್ನೆಲೆಯಲ್ಲಿ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಉಪ್ಪಿನಂಗಡಿಯಲ್ಲಿಯೂ ಹೆಚ್ಚುವರಿ ಪೊಲೀಸ್ ತುಕಡಿ ನಿಯೋಜಿಸಲಾಗಿದೆ. ಚುನಾವಣಾ ಸಂದರ್ಭದಲ್ಲಿ ರಾಜಕೀಯ ಲಾಭಗಳಿಸಲು ಉಳ್ಳಾಲ ಪ್ರಕರಣವನ್ನು ಜೀವಂತವಿರಿಸುವ ಸಾಧ್ಯತೆಯನ್ನು ಮನಗಂಡ ಪೊಲೀಸ್ ಇಲಾಖೆ ಸಾಂದರ್ಭಿಕ ಸಮಸ್ಯೆಯನ್ನು ಎದುರಿಸಲು ಹೊರ ಜಿಲ್ಲೆಗಳಿಂದ ಹೆಚ್ಚುವರಿ ತುಕುಡಿಗಳನ್ನು ಜಿಲ್ಲೆಗೆ ಕರೆಸಿಕೊಂಡಿದೆ.
ಹೊಟ್ಟೆಯಿಂದ 30 ಚಿನ್ನದ ಮಾತ್ರೆ ತೆಗೆಯಲು ಎಂಡೋಸ್ಕೋಪಿಂಗ್
ಮಂಗಳೂರು: ಚಿನ್ನದ ಮಾತ್ರೆ ಮಾಡಿ ನುಂಗಿ ವಿದೇಶದಿಂದ ಚಿನ್ನ ಸಾಗಾಟ ಮಾಡಿದ್ದ ಕೇರಳ ಮೂಲದ ಶಶಿಧರ್‌ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಂಗ್ ಮಾಡಿ 30 ಚಿನ್ನದ ಮಾತ್ರೆ ಯಶಸ್ವಿಯಾಗಿ ಹೊರ ತೆಗೆಯಲಾಗಿದೆ.
ದುಬೈಯಿಂದ ಮಂಗಳೂರು ನಿಲ್ದಾಣ ಮೂಲಕ ಚಿನ್ನವನ್ನು ಕಳ್ಳ ಸಾಗಾಟ ಮಾಡುತ್ತಿದ್ದ ಶಶಿಧರ್, ಕಸ್ಟಮ್ಸ್ ವಿಭಾಗದ ಕಣ್ಣು ತಪ್ಪಿಸಲು ಚಿನ್ನದ ಮಾತ್ರೆಗಳನ್ನು ಮಾಡಿ ನುಂಗಿದ್ದ. ಆದರೆ ಬಳಿಕ ಚಿನ್ನದ ಮಾತ್ರೆ ಬಹಿರ್ದೆಸೆ ಮೂಲಕ ಬರಬಹುದು ಎಂದು ಕೊಂಡಿದ್ದ. ಆದರೆ ಚಿನ್ನ ಬಾರದೆ ಹೊಟ್ಟೆ ನೋವು ಬಂದಿತ್ತು. ಬಳಿಕ ಚಿನ್ನದ ಮಾತ್ರೆ ಹೊರತೆಗೆಯಲು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಇದೀಗ ವೈದ್ಯರು 30 ಮಾತ್ರೆಗಳನ್ನು ತೆಗೆದಿದ್ದಾರೆ.
Click this button or press Ctrl+G to toggle between Kannada and English