ಮಂಗಳೂರು: ಅಡಿಕೆಯಲ್ಲಿರುವ ಔಷಧೀಯ ಅಂಶಗಳ ಬಗ್ಗೆ ಸಂಕಲನಗೊಳಿಸಿರುವ ಮಧ್ಯಂತರ ವರದಿಯನ್ನು ಕೇಂದ್ರ ಸರಕಾರಕ್ಕೆ ಎಪ್ರಿಲ್ 5ರಂದು ಸಲ್ಲಿಸಲಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಡಿಕೆ ಕ್ಯಾನ್ಸರ್ ಕಾರಕವಲ್ಲ. ಬದಲಾಗಿ ಅದು ಕ್ಯಾನ್ಸರನ್ನು ಗುಣಪಡಿಸುತ್ತದೆ ಎಂಬುದು ಇತ್ತೀಚಿನ ಸಂಶೋಧನೆಯಿಂದ ದೃಢಪಟ್ಟಿದೆ. ಈ ವರದಿಯನ್ನು ಕೇಂದ್ರ ಸರಕಾರದ ಕೃಷಿ ಸಚಿವ ರಾಧಮೋಹನ್ ಸಿಂಗ್ ಮತ್ತು ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಕ್ಯಾಂಪ್ಕೋ ಮತ್ತು ಕರ್ನಾಟಕ ರಾಜ್ಯ ಅಡಿಕೆ ಫೆಡರೇಶನ್‌ನ ಪ್ರತಿನಿಧಿಗಳು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ನೇತೃತ್ವದಲ್ಲಿ ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದರು.
ಕೇಂದ್ರ ಕೃಷಿ ಸಚಿವರಲ್ಲಿ ಅಡಿಕೆಯ ಔಷಧೀಯ ಗುಣಗಳ ಸಂಶೋಧನೆಗೆ ಸಿಪಿಸಿಆರ್‌ಐನ್ನು ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಿ ಅಡಿಕೆ ಬಗ್ಗೆ ರಾಸಾಯನಿಕ ಅನ್ವೇಷಣೆ, ಅಡಿಕೆ ತಿನ್ನುವ ಬಗ್ಗೆ ಸರ್ವೆ, ಔಷಧೀಯ ಗುಣಗಳ ಬಗ್ಗೆ ಸಂಶೋಧನೆಯನ್ನು ಸಿಎಸ್‌ಐಆರ್, ಸಿಐಎಂಎಪಿ, ಸಿಎಫ್‌ಟಿಆರ್‌ಐ, ಸಿಸಿಎಬಿ ಮತ್ತು ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್‌ಗಳ ಜತೆ ಸೇರಿ ಸಂಶೋಧನೆ ನಡೆಸಿ ವಿಸ್ತೃತ ವರದಿಯನ್ನು ತಯಾರಿಸಲು ಕೋರಲಾಗಿತ್ತು. ಇದೇ ಸಂದರ್ಭದಲ್ಲಿ ಆರೋಗ್ಯ ಸಚಿವರಲ್ಲಿ ಈ ವರದಿ ಬರುವವರೆಗೆ ಸರ್ವೋಚ್ಛ ನ್ಯಾಯಾಲಯದಲ್ಲಿರುವ ದಾವೆಯನ್ನು ಮುಂದುವರಿಸದಂತೆ ನ್ಯಾಯಾಲಯಕ್ಕೆ ಮನವಿ ನೀಡಲು ಒತ್ತಾಯಿಸಲಾಗಿತ್ತು ಎಂದು ಅವರು ವಿವರ ನೀಡಿದರು.
ಅಡಿಕೆ ಕ್ಯಾನ್ಸರ್ ಗುಣಪಡಿಸುವ ಗುಣವನ್ನು ಹೊಂದಿದೆ ಎಂದು 1974ರಲ್ಲಿ ಇಂಡಿಯನಂ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ವಿಜ್ಞಾನಿಗಳು ತಿಳಿಸಿದ್ದರು. ಇದೇ ಸಂಶೋಧನೆಯನ್ನು 2016ರಲ್ಲಿ ಅಮೆರಿಕದ ಖ್ಯಾತ ಎಮೆರಿ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆಯಲ್ಲಿಯೂ ದೃಢಪಡಿಸಲಾಗಿದೆ. ಇದಲ್ಲದೆ ಅಡಿಕೆ ಡಯಬಿಟಿಸ್, ಕೊಲೆಸ್ಟ್ರಾಲ್ ಮತ್ತು ಹಾನಿಕಾರಕ ಬ್ಯಾಕ್ಟೀರಿಯಗಳನ್ನು ಕಡಿಮೆ ಮಾಡುವ ಶಕ್ತಿ ಇರುವುದಾಗಿಯೂ ಸಾಬೀತಾಗಿದೆ. ಅಡಿಕೆಯಿಂದ ಅಲ್ಜಿಮರ್, ಮರೆಗುಳಿತನ ಗುಣಪಡಿಸುವ ಶಕ್ತಿಯಿದೆ. ಪ್ರಾಣಿಗಳಲ್ಲಿನ ಹೊಟ್ಟೆ ಹುಳ ನಾಶಮಾಡಲು, ಚರ್ಮರೋಗ ಕಡಿಮೆ ಮಾಡಲು, ಗಾಯಗಳನ್ನು ಗುಣಮಪಡಿಸಲು ಅಡಿಕೆ ಉಪಯುಕ್ತ ಔಷಧಿ ಎಂದು ಸಾಬೀತಾಗಿದೆ.
ಅಡಿಕೆಯನ್ನು ವಿಷ ಜಂತುಗಳ ಕಡಿತದಿಂದ ಆಗುವ ಅಪಾಯಗಳನ್ನು ತಡೆಗಟ್ಟುವ ವಾಂಟಿವೆನಮ್ ಆಗಿ ಬಳಸಬಹುದು ಎಂದೂ ಸಂಶೋಧನೆಯಿಂದ ದೃಢಪಟ್ಟಿದೆ. ಚೀನಾದ ಮೆಟಿರೀಯ ಮೆಡಿಕಾ ಔಷಧೀಯ ಪುಸ್ತಕದಲ್ಲಿ ಈ ಎಲ್ಲಾ ವಿಚಾರಗಳು ಉಲ್ಲೇಖಗೊಂಡಿವೆ. ಈ ಸಂಗತಿಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ. ಕೇಂದ್ರ ಸಚಿವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.
ಅಡಿಕೆ ದರದ ಬಗ್ಗೆ ಬೆಳೆಗಾರರು ಆತಂಕ ಪಡಬೇಕಾಗಿಲ್ಲ. ಈಗಾಗಲೇ ಎಪ್ರಿಲ್‌ನಿಂದ ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ಅವರು ಹೇಳಿದರು. ಗೋಷ್ಠಿಯಲ್ಲಿ ಸುಬ್ರಹ್ಮಣ್ಯ ಭ್, ಕೇಶವ ಭಟ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English