ಮಂಗಳೂರು : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದ್ದು, ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು ತೀವ್ರವಾಗಿ ಆಗ್ರಹಿಸಿದ್ದಾರೆ. ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 1.94 ಲಕ್ಷದಷ್ಟು ಅನರ್ಹರು ಈ ಯೋಜನೆಯ ಲಾಭ ಪಡೆದಿದ್ದಾರೆ ಎಂದು ಸ್ವತಃ ಸರ್ಕಾರವೇ ವರದಿ ನೀಡಿದೆ ಎಂದು ಕಿಡಿಕಾರಿದರು. ಇದರಲ್ಲಿ ಅತ್ಯಂತ ಆಘಾತಕಾರಿ ವಿಷಯವೆಂದರೆ, ಮರಣ ಹೊಂದಿದ ಸುಮಾರು 2.88 ಲಕ್ಷ ಮಹಿಳೆಯರ ಖಾತೆಗಳಿಗೂ ಹಣ ಪಾವತಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 3,477 ಮೃತ ಹೊಂದಿದವರ ಹೆಸರಿನಲ್ಲಿ 3.34 ಕೋಟಿ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸತೀಶ್ ಕುಂಪಲ ಅವರು ವಿವರಿಸಿದ್ದಾರೆ.
ಈ ರೀತಿಯಾಗಿ ಸರ್ಕಾರದ ಹಣ ಲೂಟಿಯಾಗುತ್ತಿರುವುದನ್ನು ಗಮನಿಸಿದರೆ, ಗೃಹಲಕ್ಷ್ಮಿ ಯೋಜನೆಯಲ್ಲೇ ಇಷ್ಟೊಂದು ಹಗರಣ ನಡೆದಾಗ ಇನ್ನುಳಿದ ಗೃಹಜ್ಯೋತಿ, ಶಕ್ತಿ ಯೋಜನೆಯಂತಹ ಗ್ಯಾರಂಟಿಗಳ ಪರಿಸ್ಥಿತಿ ಏನಾಗಿರಬಹುದು ಎಂಬ ಆತಂಕ ಎದುರಾಗಿದೆ. ಅಭಿವೃದ್ಧಿ ಕೆಲಸಗಳಿಗೆ ಬಳಸಬೇಕಾದ ಸಾರ್ವಜನಿಕರ ತೆರಿಗೆ ಹಣವನ್ನು ಕಾಂಗ್ರೆಸ್ ಸರ್ಕಾರ ತನ್ನ ಹೆಸರಿನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಇದೀಗ 3.89 ಲಕ್ಷ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಡುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳು ಮುಂದಿಟ್ಟಿದ್ದಾರೆ. ಆದರೆ, ಆರಂಭದಲ್ಲೇ ಅರ್ಹರನ್ನು ಗುರುತಿಸುವಲ್ಲಿ ಸಂಪೂರ್ಣವಾಗಿ ವಿಫಲವಾದ ಈ ಸರ್ಕಾರಕ್ಕೆ ಈಗ ಅವರನ್ನು ಕೈಬಿಡುವ ಅನಿವಾರ್ಯತೆ ಏಕಾಗಿ ಬಂತು ಎಂಬುದು ಯಕ್ಷಪ್ರಶ್ನೆಯಾಗಿದೆ.
ಪ್ರಸ್ತುತ ವ್ಯವಸ್ಥೆಯನ್ನು ಮರೆಮಾಚಲು ಈಗ ಫಲಾನುಭವಿಗಳ ಜಾತಿ ಸಮೀಕ್ಷೆ ನಡೆಸಲು ಸರ್ಕಾರ ಮುಂದಾಗಿದೆ. ಇದು ಕೇವಲ ಜನರನ್ನು ಹಾದಿ ತಪ್ಪಿಸುವ ಮತ್ತು ಒಂದು ವರ್ಗವನ್ನು ಓಲೈಸುವ ಮತ್ತೊಂದು ತುಷ್ಟೀಕರಣದ ರಾಜಕಾರಣವಾಗಿದೆ. ಈ ಯೋಜನೆಯ ಅನುಷ್ಠಾನ ಸಮಿತಿಯು ಸಂಪೂರ್ಣವಾಗಿ ವಿಫಲವಾಗಿದ್ದು, ರಾಜ್ಯದಲ್ಲಿ ಭ್ರಷ್ಟಾಚಾರದ ಬ್ರಹ್ಮಾಂಡವನ್ನೇ ಸೃಷ್ಟಿಸಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಕ್ಕೆ ಬಂದು 50 ದಿನಗಳಾಗುತ್ತಾ ಬಂದರೂ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಸಚಿವ ಸಂಪುಟ ವಿಸ್ತರಣೆ ಮಾಡಲು ಧೈರ್ಯವಿಲ್ಲದೆ, ಒಬ್ಬೊಬ್ಬ ಸಚಿವರಿಗೆ ಮೂರು ಮೂರು ಜಿಲ್ಲೆಗಳ ಜವಾಬ್ದಾರಿ ನೀಡಿ ಕೈತೊಳೆದುಕೊಳ್ಳಲಾಗಿದೆ. ಈ ತರಹದ ಅಸ್ಥಿರ ಆಡಳಿತದಿಂದ ಸರ್ಕಾರ ಪೂರ್ಣಾವಧಿ ಪೂರೈಸುವುದು ಅನುಮಾನವಾಗಿದೆ. ತಕ್ಷಣವೇ ಕಾಂಗ್ರೆಸ್ನ ಅನುಷ್ಠಾನ ಸಮಿತಿಯನ್ನು ವಜಾಗೊಳಿಸಿ, ಎಲ್ಲಾ ತಾಲೂಕು ಮತ್ತು ಜಿಲ್ಲೆಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಜನರೆದುರು ಇಡಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪ್ರೇಮಾನಂದ ಶೆಟ್ಟಿ, ತಿಲಕ್ರಾಜ್, ಪೂರ್ಣಿಮಾ, ಪೂಜಾ ಪೈ, ಮನೋಹರ್ ಶೆಟ್ಟಿ ಹಾಗೂ ಗುರುಚರಣ್ ಉಪಸ್ಥಿತರಿದ್ದರು.
ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










