ಮಂಗಳೂರು : ಕರಾವಳಿ ಮತ್ತು ರಾಜಧಾನಿ ಬೆಂಗಳೂರು ನಡುವೆ ಸಾಗುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಸಂಬಂಧ ಕಠಿಣ ಘಾಟ್ ಪ್ರದೇಶದಲ್ಲಿ ಬುಧವಾರ ನಡೆದ ಮಹತ್ವದ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡಿದೆ.
ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಉಸ್ತುವಾರಿಯಲ್ಲಿ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ ಅತ್ಯಂತ ಕಡಿದಾದ ಹಾಗೂ ಸವಾಲಿನ ಹಳಿಗಳಲ್ಲಿ ಈ ಕಿತ್ತಳೆ ಬಣ್ಣದ ವಂದೇ ಭಾರತ್ ರೈಲಿನ ತಾಂತ್ರಿಕ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಲಾಯಿತು.
ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಸಕಲೇಶಪುರ ರೈಲು ನಿಲ್ದಾಣದಲ್ಲಿ ಶಾಸಕ ಸಿಮೆಂಟ್ ಮಂಜು ಅವರು ವಿಶೇಷ ಪೂಜೆ ನೆರವೇರಿಸಿ, ಸಿಹಿ ವಿತರಿಸಿ ಸಾರ್ವಜನಿಕರೊಂದಿಗೆ ಸಂತಸ ಹಂಚಿಕೊಂಡರು.
ಸಾಮಾನ್ಯ ಪ್ರಯಾಣಿಕರ ಭಾರವನ್ನು ಕೃತಕವಾಗಿ ಸೃಷ್ಟಿಸಲು ಬೋಗಿಗಳಲ್ಲಿ ಮರಳಿನ ಚೀಲಗಳನ್ನು ತುಂಬಿ, ವಿಭಿನ್ನ ವೇಗದಲ್ಲಿ ರೈಲನ್ನು ಚಲಾಯಿಸುವ ಮೂಲಕ ತಾಂತ್ರಿಕ ಕಾರ್ಯಕ್ಷಮತೆ ಹಾಗೂ ಸುರಕ್ಷತೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು.
ಹಂತ ಹಂತವಾಗಿ ವೇಗವನ್ನು ಹೆಚ್ಚಿಸುತ್ತಾ ಘಾಟ್ ಮಾರ್ಗದಲ್ಲಿ ರೈಲು ಸುರಕ್ಷಿತವಾಗಿ ಚಲಿಸಬಲ್ಲ ಗರಿಷ್ಠ ವೇಗದ ಮಿತಿಯನ್ನು ಕಂಡುಕೊಳ್ಳಲು ರೈಲ್ವೆ ಇಂಜಿನಿಯರ್ಗಳ ತಂಡ ಹಲವು ಸುತ್ತಿನ ರನ್ ನಡೆಸಿದೆ.
ಕರಾವಳಿ ಭಾಗದ ಜನರ ಬಹುಕಾಲದ ಕನಸಾಗಿದ್ದ ಈ ಯೋಜನೆಗಾಗಿ ಆಟೋಮ್ಯಾಟಿಕ್ ತುರ್ತು ಬ್ರೇಕ್ ತಂತ್ರಜ್ಞಾನ ಹೊಂದಿರುವ 20 ಬೋಗಿಗಳ ಸುಸಜ್ಜಿತ ವಂದೇ ಭಾರತ್ ರೈಲನ್ನು ಚೆನ್ನೈನ ಐಸಿಎಫ್ನಿಂದ ತರಿಸಿಕೊಳ್ಳಲಾಗಿದೆ.
ಅತ್ಯಂತ ಕ್ಲಿಷ್ಟಕರವಾದ ಭೌಗೋಳಿಕ ಸವಾಲುಗಳನ್ನು ಹೊಂದಿರುವ ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ಸಾರ್ವಜನಿಕ ಸೇವೆ ಆರಂಭಿಸುವ ಮುನ್ನ, ರೈಲಿನ ಸುರಕ್ಷತಾ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಈ ಟ್ರಯಲ್ ರನ್ ಪ್ರಮುಖ ಹೆಜ್ಜೆಯಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









