ಮಂಗಳೂರು : ನಗರದ ಮಲ್ಲಿಕಟ್ಟೆ ಉದ್ಯಾನವನದಲ್ಲಿದ್ದ ಜಗದ್ವಿಖ್ಯಾತ ಸ್ಯಾಕ್ಸೋಫೋನ್ ವಾದಕ, ಪದ್ಮಶ್ರೀ ಕದ್ರಿ ಗೋಪಾಲನಾಥ್ ಅವರ ಸ್ಮರಣಾರ್ಥ ಸ್ಥಾಪಿಸಲಾಗಿದ್ದ ಸ್ಯಾಕ್ಸೋಫೋನ್ ಪ್ರತಿಕೃತಿಯನ್ನು ಅನಾಮಧೇಯ ಕಳ್ಳರು ಕದ್ದೊಯಿದಿದ್ದಾರೆ. ಸುಮಾರು ₹75 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದ ಈ ಪಾರ್ಕ್ನಲ್ಲಿ ಗೋಪಾಲನಾಥ್ ಅವರ ಗೌರವಾರ್ಥ ವಿಶೇಷ ಪೀಠ ನಿರ್ಮಿಸಿ, ಅದರ ಮೇಲೆ ಗಾಜಿನ ಹೊದಿಕೆಯೊಳಗೆ ಈ ಸ್ಯಾಕ್ಸೋಫೋನ್ ಮಾದರಿಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಸಾರ್ವಜನಿಕರು ಹಾಗೂ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದ್ದ ಈ ಸ್ಮಾರಕವು ಇದೀಗ ಕಳುವಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಕಳೆದ ಕೆಲವು ಸಮಯದಿಂದ ಸೂಕ್ತ ನಿರ್ವಹಣೆ ಮತ್ತು ಅನುದಾನದ ಅಭಾವದಿಂದಾಗಿ ಈ ಪಾರ್ಕ್ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳುಬಿದ್ದಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ದುಷ್ಕರ್ಮಿಗಳು ಸುಮಾರು ಒಂದು ವಾರದ ಹಿಂದೆ ಈ ಸ್ಯಾಕ್ಸೋಫೋನ್ ಪ್ರತಿಕೃತಿಯನ್ನು ಕಳವು ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯ ಕಾರ್ಪೊರೇಟರ್ ಕದ್ರಿ ಮನೋಹರ್ ಶೆಟ್ಟಿ ಅವರು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









