ಮಂಗಳೂರು : ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಂಡುಬರುತ್ತಿರುವ ಒಳಚರಂಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾಲಮಿತಿಯೊಳಗೆ ಸಮಗ್ರ ಯೋಜನೆಯೊಂದನ್ನು ಜಾರಿಗೆ ತರಲು ನಗರಾಭಿವೃದ್ಧಿ ಇಲಾಖೆಗೆ ಸಾರ್ವಜನಿಕ ಉದ್ಯಮಗಳ ಸಮಿತಿಯು ಮಹತ್ವದ ಸಲಹೆ ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಇತ್ತೀಚೆಗಷ್ಟೇ ಮಂಗಳೂರಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದ್ದ ರಾಜ್ಯ ವಿಧಾನಮಂಡಲದ 20 ಶಾಸಕರನ್ನೊಳಗೊಂಡ ಜಂಟಿ ಸಮಿತಿಯು ತನ್ನ ವರದಿಯಲ್ಲಿ ಈ ಮಹತ್ವದ ಶಿಫಾರಸನ್ನು ಉಲ್ಲೇಖಿಸಿದೆ.
ಈ ಕುರಿತು ಈಗಾಗಲೇ ನಗರಾಭಿವೃದ್ಧಿ ಇಲಾಖೆಯು ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸುವಂತೆ ಕೋರಿ ಸರ್ಕಾರಕ್ಕೆ ಅಧಿಕೃತ ಪತ್ರ ಬರೆದಿದ್ದು, ಮುಂಬರುವ ಜಂಟಿ ಅಧಿವೇಶನದಲ್ಲಿಯೇ ಈ ವಿಷಯದ ಬಗ್ಗೆ ಗಂಭೀರ ಚರ್ಚೆ ನಡೆಸಲು ಸೂಚಿಸಿದೆ. ನಗರದಲ್ಲಿ ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ನಗರೀಕರಣಕ್ಕೆ ತಕ್ಕಂತೆ ನೈರ್ಮಲ್ಯದ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದು ಅನಿವಾರ್ಯವಾಗಿದ್ದು, ಗುರುತಿಸಲಾದ ಸೂಕ್ಷ್ಮ ಪ್ರದೇಶಗಳಲ್ಲಿ ಭೂಗತ ಒಳಚರಂಡಿ ಕಾಮಗಾರಿಗಳಿಗೆ ಪ್ರಥಮ ಆದ್ಯತೆ ನೀಡಬೇಕಿದೆ. ಪ್ರಸ್ತುತ ಸಮರ್ಪಕ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ಪರಿಸರ ಮಾಲಿನ್ಯ, ಸಾರ್ವಜನಿಕ ಅಸಮಾಧಾನ ಮತ್ತು ಜಲಮೂಲಗಳ ಕಲುಷಿತಗೊಳ್ಳುವಿಕೆ ಹೆಚ್ಚಾಗುತ್ತಿದ್ದು, ನೈರ್ಮಲ್ಯ ಮಟ್ಟದ ಸುಧಾರಣೆ ಹಾಗೂ ಸುಸ್ಥಿರ ನಗರಾಭಿವೃದ್ಧಿಗಾಗಿ ಈ ಯೋಜನೆ ತುರ್ತಾಗಿ ಜಾರಿಯಾಗಬೇಕಿದೆ.
ಪ್ರಸ್ತುತ ಜಲ ಸಂಸ್ಕರಣಾ ಘಟಕಗಳಿಂದ ಶುದ್ಧೀಕರಿಸಿದ ನೀರನ್ನು ನೇರವಾಗಿ ರಾಜಕಾಲುವೆಗಳ ಮುಖಾಂತರ ನದಿಗಳಿಗೆ ಬಿಡಲಾಗುತ್ತಿದ್ದು, ಇದು ನದಿ ನೀರನ್ನು ಕಲುಷಿತಗೊಳಿಸುತ್ತಿದೆ. ಹೀಗಾಗಿ ಹೊಸ ಯೋಜನೆಯನ್ನು ತಯಾರಿಸುವಾಗ ಸಂಸ್ಕರಿಸಿದ ನೀರನ್ನು ಮರುಬಳಕೆ ಮಾಡುವ ತಂತ್ರಜ್ಞಾನ ಹಾಗೂ ಕಾಮಗಾರಿಗಳನ್ನು ಕಡ್ಡಾಯವಾಗಿ ಸೇರಿಸಿಕೊಳ್ಳಬೇಕು ಎಂದು ಸಮಿತಿ ಹೇಳಿದೆ. ಈ ಹಿಂದೆ ನಡೆದ ಕಾಮಗಾರಿಗಳಲ್ಲಿ ಸಾಕಷ್ಟು ಲೋಪದೋಷಗಳಿರುವುದನ್ನು ಮಹಾಲೇಖಪಾಲರ (CAG) ಲೆಕ್ಕ ಪರಿಶೋಧನಾ ವರದಿ ಎತ್ತಿ ತೋರಿಸಿದ್ದು, ಪ್ರಸ್ತಾಪಿತ ಸುಮಾರು 1,250 ಕೋಟಿ ರೂಪಾಯಿ ವೆಚ್ಚದ ಹೊಸ ಸಮಗ್ರ ಯೋಜನೆಯಲ್ಲಾದರೂ ಹಣದ ದುಂದುವೆಚ್ಚ ಹಾಗೂ ಹಳೇ ತಪ್ಪುಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಸಮಿತಿ ಸರ್ಕಾರಕ್ಕೆ ಸೂಚಿಸಿದೆ.
ನಗರದ ಹಲವೆಡೆ ಒಳಚರಂಡಿ ಸೋರಿಕೆಯಿಂದಾಗಿ ಕುಡಿಯುವ ಬಾವಿ ನೀರು ಹಾಗೂ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾದ ಕೆರೆಗಳ ನೀರು ಕಲುಷಿತಗೊಂಡಿದೆ. ಈ ಹಿಂದೆ ಪಾಲಿಕೆಯ ಸಭೆಗಳಲ್ಲಿ ಬಿಜೆಪಿ ಆಡಳಿತವಿದ್ದಾಗ ಈ ಬಗ್ಗೆ ಧ್ವನಿ ಎತ್ತಿದಾಗ ಎಲ್ಲವೂ ಸರಿಯಾಗಿದೆ ಎಂದು ಸಮರ್ಥಿಸಿಕೊಳ್ಳಲಾಗಿತ್ತು. ಆದರೆ ಇತ್ತೀಚೆಗೆ ಕದ್ರಿಯಲ್ಲಿ ಕಲುಷಿತ ನೀರು ಸರಬರಾಜಾಗಿ ಸಾರ್ವಜನಿಕರು ತೊಂದರೆಗೀಡಾದಾಗ ಸ್ಥಳೀಯ ಬಿಜೆಪಿ ಶಾಸಕರು ಇದರ ಹೊಣೆಯನ್ನು ಕಾಂಗ್ರೆಸ್ ಮೇಲಕ್ಕೆ ಹಾಕುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಶಾಸಕರಾಗಿರುವ ವೇದವ್ಯಾಸ ಕಾಮತ್ ಅವರು ನಗರದ ಒಳಚರಂಡಿ ವ್ಯವಸ್ಥೆಯ ಅಭಿವೃದ್ಧಿಗೆ ಕೇಂದ್ರ ಅಥವಾ ರಾಜ್ಯದಿಂದ ಯಾವುದೇ ಸಮಗ್ರ ಯೋಜನೆಯನ್ನು ತಂದಿಲ್ಲ ಎಂದು ಐವನ್ ಡಿಸೋಜಾ ಕಿಡಿಕಾರಿದ್ದಾರೆ. ಕೇವಲ ರಾಜಕೀಯ ಕೆಸರೆರಚಾಟದಿಂದ ಜನರಿಗೆ ಮೂಲಭೂತ ಸೌಕರ್ಯ ಸಿಗುವುದಿಲ್ಲ, ನಗರದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರ ಸಹಕಾರ ಬೇಕಿರುವುದರಿಂದ ಸ್ಥಳೀಯ ಶಾಸಕರು ಹಾಗೂ ಸಂಸದರು ರಾಜಕೀಯವನ್ನು ಬದಿಗಿಟ್ಟು ಒಟ್ಟಾಗಿ ಶ್ರಮಿಸಬೇಕಿದೆ ಎಂದು ಅವರು ಕರೆ ನೀಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










