ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ನಾದಶ್ರೀ ಕಲಾಕೇಂದ್ರದಲ್ಲಿ ಭಾನುವಾರ ನಡೆದ 22ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ-2026 ಅತ್ಯಂತ ಯಶಸ್ವಿಯಾಗಿ ನೆರವೇರಿತು. ನುಡಿ, ಸಾಹಿತ್ಯ ಮತ್ತು ಕಲಾ ವೈಭವವನ್ನು ಪಸರಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಸಮಾರಂಭಕ್ಕೆ ನಾಡಿನ ವಿವಿಧ ಭಾಗಗಳ ಕಲಾಭಿಮಾನಿಗಳು ಸಾಕ್ಷಿಯಾದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ಅವರು, ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಪ್ರತಿಯೊಬ್ಬ ಕನ್ನಡಿಗನೂ ಶ್ರಮಿಸಬೇಕು ಎಂದು ಕರೆ ನೀಡಿದರು. ಕನ್ನಡವನ್ನು ದಿನನಿತ್ಯದ ಬದುಕಿನ ಬಳಕೆಯಲ್ಲಿ ತರುವುದರ ಜೊತೆಗೆ ಮುಂಬರುವ ಪೀಳಿಗೆಗೆ ನಮ್ಮ ನೆಲದ ಸಾಂಸ್ಕೃತಿಕ ಬೇರುಗಳನ್ನು ತಲುಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ಕವಿ ಹಾಗೂ ಸಂಶೋಧಕ ಡಾ. ಕಾ. ರಾಮೇಶ್ವರಪ್ಪ (ಸಿರಿಗಂಧ) ಅವರು, ಭಾರತದ ವೈವಿಧ್ಯಮಯ ಸಂಸ್ಕೃತಿಯಲ್ಲಿ ಕನ್ನಡಕ್ಕಿರುವ ವಿಶಿಷ್ಟ ಸ್ಥಾನಮಾನ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯಿಕ-ಜನಪದ ಶ್ರೀಮಂತಿಕೆಯನ್ನು ಸ್ಮರಿಸಿದರು. 1955ರಲ್ಲಿ ನಡೆದ 35ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪುಗಳನ್ನು ಹಂಚಿಕೊಳ್ಳುತ್ತಾ, ಇಂತಹ ಸಮ್ಮೇಳನಗಳು ಜನಮನಗಳನ್ನು ಬೆಸೆಯುವ ಕಾರ್ಯ ಮಾಡುತ್ತವೆ ಎಂದು ಪ್ರತಿಪಾದಿಸಿದರು.
ಮಂಜುನಾಥ್ ಎಜುಕೇಶನ್ ಟ್ರಸ್ಟ್, ರೋಟರಿ ಕ್ಲಬ್ ಕುಮಟಾ, ಕನ್ನಡ ಸಾಹಿತ್ಯ ಪರಿಷತ್ ಉತ್ತರ ಕನ್ನಡ ಮತ್ತು ಹೃದಯ ವಾಹಿನಿ ಕರ್ನಾಟಕ ಸಂಘಟನೆಗಳು ಒಗೂಡಿ ಈ ಬೃಹತ್ ಸಮಾವೇಶವನ್ನು ರೂಪಿಸಿದ್ದವು. ರೋಟರಿ ಕ್ಲಬ್ ಅಧ್ಯಕ್ಷ ಸಿಎ. ವಿನಾಯಕ ಹೆಗಡೆ, ಸಮಿತಿಯ ಗೌರವಾಧ್ಯಕ್ಷ ರೋಹಿದಾಸ ನಾಯಕ ಹಾಗೂ ಹೃದಯವಾಹಿನಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಸಾಗರ್ ಅವರುಗಳು ಕನ್ನಡ ಸಾಂಸ್ಕೃತಿಕ ಪರಂಪരೆಯನ್ನು ಎತ್ತಿಹಿಡಿಯುವಲ್ಲಿ ಇಂತಹ ವೇದಿಕೆಗಳ ಪಾತ್ರ ದೊಡ್ಡದು ಎಂದು ಅಭಿಪ್ರಾಯಪಟ್ಟರು. ಗಾಯಕಿ ಸಂಧ್ಯಾ ಹೆಗಡೆ ಪ್ರಾರ್ಥಿಸಿದರೆ, ಉದ್ಯಮಿ ಗಣಪತಿ ಭಾಗ್ವತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಮ್ಮೇಳನದ ಭಾಗವಾಗಿ ಸಾಧಕರಾದ ಪುಟ್ಟು ಕುಲಕರ್ಣಿ (ಸಾಹಿತ್ಯ), ಶ್ರೀಧರ ಬಳಗಾರ (ಸಂಶೋಧನೆ), ನಾಗರಾಜ ನಾಯ್ಕ ಕಾಗಾಲ (ಸಂಘಟನೆ), ಶಿವಸ್ವಾಮಿ ಎನ್.ಆರ್. (ಸಮಾಜಸೇವೆ), ಭಾಷಾ ಪಟೇಲ್ ಹಾಗೂ ವಿಕ್ರಮ ಆರ್. ನಾಯ್ಕ (ಕಾನೂನು) ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಪ್ರೊ. ಟಿ.ಜಿ. ಭಟ್ ನೇತೃತ್ವದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಪಿ.ಆರ್. ನಾಯ್ಕ, ಎನ್.ಆರ್. ಗಜು, ರವೀಂದ್ರ ಭಟ್ ಸೂರಿ, ವೆಂಕಟೇಶ್ ಬೈಲೂರು ಸೇರಿದಂತೆ ಹಲವು ಕವಿಗಳು ಕವನ ವಾಚಿಸಿದರು. ರೋಹಿದಾಸ ನಾಯಕರ ‘ಸೌಗಂಧಿಕ’ ಕವನ ಸಂಕಲನ ಬಿಡುಗಡೆಗೊಂಡಿತು.
ಸಾಂಸ್ಕೃತಿಕ ರಸಸಂಜೆಯಲ್ಲಿ ಬೆಂಗಳೂರಿನ ಅಂಬಾಶ್ರೀ ನೃತ್ಯ ಶಾಲೆ, ವಿದುಷಿ ವಿಜೇತಾ ಭಂಡಾರಿ ನಿರ್ದೇಶನದ ನೃತ್ಯರೂಪಕ, ಹಾಸ್ಯ ಕಲಾವಿದ ಮಹದೇವ ಸತ್ತಿಗೇರಿ ಅವರ ಹಾಸ್ಯ ಕೂಟ, ಮೈಸೂರಿನ ಶ್ರೀ ಸರಸ್ವತಿ ವಾದ್ಯವೃಂದದ ‘ಲಯ-ನಾದ-ತರಂಗ’ ಹಾಗೂ ಚೈತನ್ಯ ಗುರುಕುಲದ ಮಲ್ಲಕಂಬ ಪ್ರದರ್ಶನಗಳು ನೆರೆದವರ ಮನಸೆಳೆದವು. ರವಿ ಎಂ. ಕುಲಶೇಖರ ಕಾರ್ಯಕ್ರಮ ನಿರೂಪಿಸಿ, ಪ್ರಮೋದ ನಾಯ್ಕ ವಂದಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









