ಮಂಗಳೂರು : ಮಂಗಳೂರಿನ ಎಂಆರ್ಪಿಎಲ್ ಸಂಸ್ಥೆಯಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಅಗ್ನಿ ಅವಘಡದ ಬೆನ್ನಲ್ಲೇ, ಸುದೀರ್ಘ ಇತಿಹಾಸ ಹೊಂದಿರುವ ನೆಲ್ಲಿದಡಿ ಜುಮಾದಿ ದೈವಸ್ಥಾನಕ್ಕೆ ಸಂಬಂಧಿಸಿದ ಹಳೆಯ ಹೋರಾಟ ಹಾಗೂ ದೈವ ನುಡಿದಿದ್ದ ಅಭಯದ ಮಾತುಗಳು ಕರಾವಳಿಯಾದ್ಯಂತ ಮತ್ತೆ ತೀವ್ರ ಚರ್ಚೆಗೆ ಗ್ರಾಸವಾಗಿವೆ. ನೂರಾರು ವರ್ಷಗಳ ಇತಿಹಾಸವಿರುವ ನೆಲ್ಲಿದಡಿ ಜುಮಾದಿ ದೈವಸ್ಥಾನದ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಎಂಆರ್ಪಿಎಲ್ ಆಡಳಿತ ಮಂಡಳಿ ಯತ್ನಿಸುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಹಲವು ವರ್ಷಗಳಿಂದ ಕಾನೂನು ಹಾಗೂ ಸಾಮಾಜಿಕ ಹೋರಾಟ ನಡೆಸುತ್ತಿದ್ದು, ಅಂತಿಮವಾಗಿ ದೈವದ ಕಾರಾಣಿಕದ ಮೊರೆ ಹೋಗಿದ್ದರು.
2026ರ ಮೇ ತಿಂಗಳಲ್ಲಿ ಜರುಗಿದ ದೈವದ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರಿಗೆ ಅಭಯ ನೀಡಿದ್ದ ದೈವವು, “ನನ್ನ ಮಣ್ಣನ್ನು ಮತ್ತು ಅಸ್ತಿತ್ವವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ನನಗೆ ತಿಳಿದಿದೆ. ನೀವ್ಯಾರೂ ಆತಂಕ ಪಡಬೇಕಾಗಿಲ್ಲ. ಇನ್ನು ಒಂದೇ ವರ್ಷದ ಅವಧಿಯಲ್ಲಿ ನಾನು ಏನು ಮಾಡುತ್ತೇನೆ ಎಂಬುದನ್ನು ಕಾದು ನೋಡಿ” ಎಂದು ಕಡಾಖಂಡಿತವಾಗಿ ನುಡಿದಿತ್ತೆಂದು ಸ್ಥಳೀಯ ನಿವಾಸಿಗಳು ನೆನಪಿಸಿಕೊಳ್ಳುತ್ತಾರೆ. ಕಳೆದ ವರ್ಷದ ವರ್ಷಾವಧಿ ನೇಮೋತ್ಸವದ ವೇಳೆಯೂ ತನ್ನ ಜಾಗವನ್ನು ತಾನೇ ರಕ್ಷಿಸಿಕೊಳ್ಳುವುದಾಗಿ ದೈವವು ಕಾರ್ಣಿಕದ ಮಾತುಗಳನ್ನಾಡಿತ್ತು ಎಂದು ಗ್ರಾಮಸ್ಥರು ಹೇಳುತ್ತಾರೆ.
ಎಂಆರ್ಪಿಎಲ್ನಲ್ಲಿ ನಡೆದ ಅನಿರೀಕ್ಷಿತ ಸ್ಫೋಟಕ್ಕೂ ಹಾಗೂ ದೈವದ ಈ ಅಭಯ ನುಡಿಗಳಿಗೂ ಯಾವುದೇ ವೈಜ್ಞಾನಿಕ ತರ್ಕ ಅಥವಾ ಪ್ರತ್ಯಕ್ಷ ಸಾಕ್ಷ್ಯಾಧಾರಗಳಿಲ್ಲವಾದರೂ, ಈ ಅವಘಡ ಸಂಭವಿಸಿದ ತಕ್ಷಣವೇ ನೆಲ್ಲಿದಡಿ ಕ್ಷೇತ್ರದ ಜಾಗದ ವಿವಾದ ಹಾಗೂ ಗ್ರಾಮಸ್ಥರ ಆಳವಾದ ಧಾರ್ಮಿಕ ನಂಬಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಬಿಸಿಯೇರಿದ ಚರ್ಚೆಗೆ ಕಾರಣವಾಗಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









