ಮಂಗಳೂರು :: ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗ, ಭಾಷಾ ಸಂಗಮ, ಐ.ಕ್ಯೂ.ಎ.ಸಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ ಸಂಘ (ವಿಕಾಸ) ಜಂಟಿಯಾಗಿ ಆಯೋಜಿಸಿದ್ದ “ಕನ್ನಡ ಸಾಹಿತ್ಯ ಮತ್ತು ರಂಗಭೂಮಿ” ವಿಷಯದ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣವನ್ನು ಮೈಸೂರು ರಂಗಾಯಣದ ರಂಗಕರ್ಮಿ ಜನ್ನಿ (ಜನಾರ್ಧನ್) ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಸಾಹಿತ್ಯ ಮತ್ತು ರಂಗಭೂಮಿ ಒಂದಕ್ಕೊಂದು ಪೂರಕವಾಗಿದ್ದು, ಉತ್ತಮ ಸಾಹಿತ್ಯವೇ ದೇಶದ ನಿಜವಾದ ಬಲವನ್ನು ನಿರ್ಧರಿಸುತ್ತದೆ ಎಂದು ಪ್ರತಿಪಾದಿಸಿದರು.
ಸಾಹಿತ್ಯಿಕ ಕೃತಿಯನ್ನು ರಂಗರೂಪಕ್ಕೆ ತರುವುದು ಅತ್ಯಂತ ಸೃಜನಶೀಲ ಹಾಗೂ ಸೂಕ್ಷ್ಮ ಪ್ರಕ್ರಿಯೆಯಾಗಿದೆ. ಲೇಖಕನ ಮೂಲ ಭಾವನೆ, ನಿರ್ದೇಶಕನ ಕಲ್ಪನೆ, ನಟರ ಅಭಿನಯ, ರಂಗಸಜ್ಜಿಕೆ, ಬೆಳಕು ಹಾಗೂ ಸಂಗೀತವೆಲ್ಲವೂ ಒಗೂಡಿದಾಗ ಮಾತ್ರ ನಾಟಕವು ಪ್ರೇಕ್ಷಕರಿಗೆ ಜೀವಂತ ಅನುಭವ ನೀಡಲು ಸಾಧ್ಯ ಎಂದು ಜನ್ನಿ ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಪಾಂಡಿಚೇರಿ ವಿಶ್ವವಿದ್ಯಾನಿಲಯದ ಡಾ. ಪವಿತ್ರ ದಿಕ್ಸೂಚಿ ಭಾಷಣ ಮಾಡಿದ್ದರೆ, ಮಂಗಳೂರು ವಿ.ವಿ. ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಸಂಶೋಧನಾ ಲೇಖನಗಳ ಕೃತಿಯನ್ನು ಲೋಕಾರ್ಪಣೆಗೊಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ರೆ. ಫಾ. ಇವನ್ ಮೈಕೆಲ್ ರೋಡ್ರಿಗಸ್ ಅವರು, ಈ ವಿಚಾರಸಂಕಿರಣವು ಸಾಹಿತ್ಯ ಮತ್ತು ರಂಗಭೂಮಿಯನ್ನು ಬೆಸೆಯುವುದಷ್ಟೇ ಅಲ್ಲದೆ, ಯುವ ಸಮುದಾಯವನ್ನು ಸಾಂಸ್ಕೃತಿಕ ಚಿಂತನೆ ಹಾಗೂ ಸೃಜನಶೀಲತೆಯತ್ತ ಸೆಳೆಯುವ ಯಶಸ್ವಿ ಪ್ರಯತ್ನ ಎಂದರು. ಕಾಲೇಜಿನ ಉಪನ್ಯಾಸಕರು ನಡೆಸಿಕೊಟ್ಟ ‘ಮಹಾ ಇಳೆ’ ಎಂಬ ರಂಗರೂಪದ ನಾಟಕ ಪ್ರದರ್ಶನವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಸಮಾರೋಪ ಸಮಾರಂಭದಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರೊ. ಮಾಧವ ಎಂ.ಕೆ. ಅವರು ಮುಕ್ತಾಯದ ನುಡಿಗಳನ್ನು ಆಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಲ್ವಿನ್ ಸೆರಾವೊ, ಬೆಂಗಳೂರು ಕ್ರೈಸ್ಟ್ ಅಕಾಡೆಮಿಯ ಡಾ. ಮಹೇಶ್ ಎಂ., ವಿಕಾಸದ ಅಧ್ಯಕ್ಷ ಡಾ. ಚಿನ್ನಸ್ವಾಮಿ ಎನ್. ಸೇರಿದಂತೆ ಹಲವು ಸಾಹಿತ್ಯ ಹಾಗೂ ರಂಗಾಸಕ್ತರು ಭಾಗವಹಿಸಿದ್ದರು. ಸಂಯೋಜಕಿ ಶೆಟ್ಟಿ ಸ್ವಾಗತಿಸಿ, ಭಾಷಾ ವಿಭಾಗದ ಮುಖ್ಯಸ್ಥೆ ಸೌಮ್ಯಾ ಕೋಟ್ಯಾನ್ ಧನ್ಯವಾದ ಸಲ್ಲಿಸಿದರು. ಪ್ರಿಯಾ ಭಟ್ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









