ಮಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸೆಪ್ಟೆಂಬರ್ 5ರಂದು ಮಂಗಳೂರು ನಗರಾದ್ಯಂತ ಮೊಸರುಕುಡಿಕೆ ಹಾಗೂ ವೈಭವದ ಶೋಭಾಯಾತ್ರೆಗಳು ನಡೆಯಲಿದ್ದು, ಪ್ರಮುಖ ರಸ್ತೆಗಳಲ್ಲಿ ಭಾರಿ ವಾಹನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಿ, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚನೆ ನೀಡಿದ್ದಾರೆ.
ತೊಕ್ಕೊಟ್ಟು ಒಳಪೇಟೆ ಮೊಸರುಕುಡಿಕೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ-66ರ ತೊಕ್ಕೊಟ್ಟು ಜಂಕ್ಷನ್ನಿಂದ ಕೊಲ್ಯ ವರೆಗೆ ಮತ್ತು ಉಳ್ಳಾಲ ಅಬ್ಬಕ್ಕ ವೃತ್ತದ ಭಾಗದಲ್ಲಿ ಸಂಚಾರ ದಟ್ಟಣೆ ಕಂಡುಬರಲಿದೆ. ಈ ವೇಳೆ ತೊಕ್ಕೊಟ್ಟು ಮಾರ್ಗವಾಗಿ ತಲಪಾಡಿಗೆ ತೆರಳುವ ವಾಹನಗಳು ತೊಕ್ಕೊಟ್ಟು ಜಂಕ್ಷನ್ ಬಳಿ ಸರ್ವಿಸ್ ರಸ್ತೆಗೆ ತಿರುಗಿ ದೇರಳಕಟ್ಟೆ, ಮಡ್ಯಾರ್, ಮಾಡೂರು ಹಾಗೂ ಬೀರಿಕೋಟೆಕಾರ್ ಜಂಕ್ಷನ್ ಮುಖಾಂತರ ಸಾಗಬಹುದು. ಹಾಗೆಯೇ ಉಳ್ಳಾಲ ಅಬ್ಬಕ್ಕ ವೃತ್ತ ಹಾಗೂ ತೊಕ್ಕೊಟ್ಟು ಒಳಪೇಟೆ ಕಡೆಗೆ ಸಂಚರಿಸುವ ವಾಹನಗಳು ಬೀರಿಕೋಟೆಕಾರ್-ಸೋಮೇಶ್ವರ ಮಾರ್ಗವನ್ನು ಬಳಸಬಹುದಾಗಿದೆ.
ಕದ್ರಿ ಶ್ರೀ ಗೋಪಾಲಕೃಷ್ಣಮಠ ಹಾಗೂ ಕದ್ರಿ ಕಂಬಳ ಮೊಸರುಕುಡಿಕೆ ಹಿನ್ನೆಲೆಯಲ್ಲಿ ಬಟ್ಟಗುಡ್ಡೆಯಿಂದ ಕದ್ರಿ ಕಂಬಳ-ಭಾರತ್ ಬೀಡಿವರೆಗಿನ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿರಲಿದೆ. ಬಟ್ಟಗುಡ್ಡೆಯಿಂದ ಕದ್ರಿ ಕಂಬಳಕ್ಕೆ ಸಂಚರಿಸುವ ಸವಾರರು ಬಿಜೈ ಜಂಕ್ಷನ್, ಪಿಂಟೋ ಬೇಕರಿ ಹಾಗೂ ಕರಂಗಲಪಾಡಿ ಮಾರ್ಗವಾಗಿ ಸಾಗಬಹುದು. ಭಾರತ್ ಬೀಡಿ ಕಡೆಯಿಂದ ಬಟ್ಟಗುಡ್ಡೆ ಕಡೆಗೆ ಹೋಗುವ ವಾಹನಗಳು ಮಲ್ಲಿಕಟ್ಟೆ ಹಾಗೂ ನಂತೂರು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು.
ಅತ್ತಾವರದ ಶ್ರೀ ಅರಸು ಮುಂಡತ್ತಾಯ ಮೈದಾನದ ಬಳಿ ನಡೆಯುವ ಮೊಸರುಕುಡಿಕೆಯಿಂದಾಗಿ ಕೋಟಿಚೆನ್ನಯ ವೃತ್ತದಿಂದ ಬಾಬುಗುಡ್ಡೆ, ಅತ್ತಾವರ ಕೆ.ಎಂ.ಸಿ. ರಸ್ತೆ ಹಾಗೂ ಆನಂದ ಶೆಟ್ಟಿ ವೃತ್ತದವರೆಗೆ ಸಂಚಾರ ವ್ಯತ್ಯಯ ಉಂಟಾಗಲಿದೆ. ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ವೆಲೆನ್ಸಿಯಾ ಮಾರ್ಗವಾಗಿ ತಮ್ಮ ಗಮ್ಯಸ್ಥಾನ ತಲುಪಬಹುದು.
ಕೊಟ್ಟಾರದ ಶ್ರೀ ಕೃಷ್ಣ ಜ್ಞಾನೋದಯ ಭಜನಾ ಮಂದಿರದ ಮೊಸರುಕುಡಿಕೆ ಪ್ರಯುಕ್ತ ಕೊಟ್ಟಾರ ಚೌಕಿಯಿಂದ ಉರ್ವಸ್ಟೋರ್ ಜಂಕ್ಷನ್ವರೆಗೆ ದಟ್ಟಣೆ ಇರಲಿದೆ. ಲಾಲ್ಬಾಗ್ ಅಥವಾ ನಾರಾಯಣಗುರು ವೃತ್ತದಿಂದ ಕೊಟ್ಟಾರ ಚೌಕಿಗೆ ಹೋಗುವ ವಾಹನಗಳು ಕೆ.ಎಸ್.ಆರ್.ಟಿ.ಸಿ.-ಕುಂಟಿಕಾನ ಮಾರ್ಗವನ್ನು ಬಳಸಬೇಕು. ಕೊಟ್ಟಾರ ಚೌಕಿಯಿಂದ ಲಾಲ್ಬಾಗ್ ಕಡೆಗೆ ಬರುವ ಲಘು ವಾಹನಗಳು ಕುಂಟಿಕಾನ-ಬಿಜೈ ಮೂಲಕ ಹಾಗೂ ಘನ ವಾಹನಗಳು ಕುಂಟಿಕಾನ-ಕೆ.ಪಿ.ಟಿ. ವೃತ್ತದ ಮಾರ್ಗವಾಗಿ ಚಲಿಸಬೇಕಾಗುತ್ತದೆ.
ಮೆರವಣಿಗೆ ಹಾಗೂ ಕಾರ್ಯಕ್ರಮಗಳು ನಡೆಯುವ ರಸ್ತೆಗಳಲ್ಲಿ ಸಾರ್ವಜನಿಕರು ಅನಗತ್ಯವಾಗಿ ವಾಹನಗಳನ್ನು ಪಾರ್ಕ್ ಮಾಡಬಾರದು ಮತ್ತು ಸಂಚಾರ ನಿಯಂತ್ರಣ ಪ್ರಕ್ರಿಯೆಯಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕಾಗಿ ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









