ಮಂಗಳೂರು : ಕಾಂಚನಾ ಟೆಕ್ಸ್ಟೈಲ್ಸ್ ವ್ಯವಸ್ಥಾಪಕ ದಿನೇಶ್ ರಾಜ್ ಹತ್ಯೆ ಪ್ರಕರಣ ಸೇರಿದಂತೆ ಒಟ್ಟು ಆರು ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ, ಕಳೆದ 11 ವರ್ಷಗಳಿಂದ ಕಾನೂನಿನ ಕಣ್ಣಿಗೆ ಮಣ್ಣು ಎರೆಸಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಶಾಹುಲ್ ಹಮೀದ್ನನ್ನು ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಕೊಲೆ ಪ್ರಕರಣ ಒಳಗೊಂಡಂತೆ ಒಟ್ಟು ಮೂರು ಪ್ರಕರಣಗಳಲ್ಲಿ ಈತನ ವಿರುದ್ಧ ನ್ಯಾಯಾಲಯವು ಈಗಾಗಲೇ ವಾರಂಟ್ ಜಾರಿಗೊಳಿಸಿತ್ತು. ಬಂದಿತ ಆರೋಪಿಯ ಮೇಲೆ ಅಪಹರಣ, ದರೋಡೆ, ಕೊಲೆ ಯತ್ನ ಹಾಗೂ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪಗಳಿದ್ದು, ಮಂಗಳೂರಿನ ವಿವಿಧ ಠಾಣೆಗಳಾದ ಉಳ್ಳಾಲದಲ್ಲಿ 3, ಗ್ರಾಮಾಂತರದಲ್ಲಿ 1, ಬಂದರು ಠಾಣೆಯಲ್ಲಿ 1 ಮತ್ತು ಬರ್ಕೆಯಲ್ಲಿ 1 ಪ್ರಕರಣ ದಾಖಲಾಗಿದೆ.
ಆರೋಪಿ ಶಾಹುಲ್ ಹಮೀದ್ ಹಿಂದೆ ಜೈಲಿನಲ್ಲಿದ್ದ ಅವಧಿಯಲ್ಲೂ ತನ್ನ ಅಪರಾಧ ಜಗತ್ತಿನ ಕೃತ್ಯವನ್ನು ಮುಂದುವರಿಸಿದ್ದು, ಸಹ ಕೈದಿ ಶಶಿಕಿರಣ್ ಎಂಬಾತನ ಕೊಲೆಗೆ ಯತ್ನಿಸಿದ ಆರೋಪದಡಿ ಬರ್ಕೆ ಠಾಣೆಯಲ್ಲಿ ಐಪಿಸಿ 307 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಜಿಲ್ಲೆಯನ್ನು ತಲ್ಲಣಗೊಳಿಸಿದ್ದ ನರಸಿಂಹ ಶೆಟ್ಟಿಗಾರ್ ಹಾಗೂ ಪೊಳಲಿ ಅನಂತ ಮೂರ್ತಿ ಅವರ ಕೊಲೆ ಪ್ರಕರಣಗಳಲ್ಲೂ ಈತ ಭಾಗಿಯಾಗಿದ್ದ ಎನ್ನಲಾಗಿದ್ದರೂ, ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೀರ್ಘ ಕಾಲದಿಂದ ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗದೆ ಸತತವಾಗಿ ವಾರಂಟ್ ಮತ್ತು ಪ್ರಖ್ಯಾಪನೆಗಳನ್ನು ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ, ಆರೋಪಿಯ ವಿರುದ್ಧ ಇದೀಗ ಮತ್ತೊಂದು ಹೊಸ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










