ಮಂಗಳೂರು : ಹಳೆಯಂಗಡಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕೊನೆಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿರುವ ಕೆಲವು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಶಿಸ್ತಿನ ಸಂಕೇತವಾದ ಕಾಲೇಜು ಸಮವಸ್ತ್ರವನ್ನು ಬಲವಂತವಾಗಿ ಹರಿದು ಹಾಕಿ, ಮಾರ್ಕರ್ ಪೆನ್ಗಳಿಂದ ಪರಸ್ಪರರ ಬಟ್ಟೆಗಳ ಮೇಲೆ ಸಹಿ ಮಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ದೃಶ್ಯಾವಳಿಗಳನ್ನು ವೀಕ್ಷಿಸಿದ ಸಾರ್ವಜನಿಕರು ಹಾಗೂ ನೆಟ್ಟಿಗರು ವಿದ್ಯಾರ್ಥಿಗಳ ಇಂತಹ ಬಾಲಿಶ ಹಾಗೂ ಸಂಸ್ಕಾರಹೀನ ನಡವಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
ವಿದ್ಯಾಸಂಸ್ಥೆಯ ಘನತೆ, ಸಮಾನತೆ ಮತ್ತು ಶಿಸ್ತಿನ ಪ್ರತೀಕವಾಗಿರುವ ಸಮವಸ್ತ್ರವನ್ನು ಈ ರೀತಿಯಾಗಿ ದುರ್ಬಳಕೆ ಮಾಡಿ ವಿಕೃತಿ ಮೆರೆದಿರುವುದು ಶಿಕ್ಷಣ ಕ್ಷೇತ್ರಕ್ಕೆ ತಂದ ಅವಮಾನವಾಗಿದೆ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ. ಪದವಿ ತರಗತಿಯ ಹಿರಿಯ ವಿದ್ಯಾರ್ಥಿಗಳೇ ಇಂತಹ ಬೇಜವಾಬ್ದಾರಿ ನಡತೆ ಪ್ರದರ್ಶಿಸಿದರೆ ಮುಂದಿನ ದಿನಗಳಲ್ಲಿ ಕಿರಿಯ ವಿದ್ಯಾರ್ಥಿಗಳಿಗೂ ತಪ್ಪು ಸಂದೇಶ ರವಾನೆಯಾಗುತ್ತದೆ. ಕೇವಲ ಪದವಿ ಪ್ರಮಾಣಪತ್ರ ಪಡೆಯುವುದಕ್ಕಿಂತ ಮುಂಚೆ ಬದುಕಿಗೆ ಅಗತ್ಯವಿರುವ ಕನಿಷ್ಠ ಸಂಸ್ಕಾರ ಹಾಗೂ ವಿನಯವನ್ನು ಕಲಿಯುವುದು ಮುಖ್ಯ ಎಂದು ನೆಟ್ಟಿಗರು ಬುದ್ಧಿವಾದ ಹೇಳಿದ್ದಾರೆ. ಘಟನೆಗೆ ಕಾರಣರಾದ ವಿದ್ಯಾರ್ಥಿಗಳು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಹಾಗೂ ಕಾಲೇಜು ಆಡಳಿತ ಮಂಡಳಿಯು ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸಿ ಮುಂದೆ ಇಂತಹ ಅಶಿಸ್ತಿನ ವರ್ತನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










