ಮಂಗಳೂರು : ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ವತಿಯಿಂದ ಸೋಮವಾರ ನಾಟೆಕಲ್ ಕಣಚೂರು ಸಭಾಂಗಣದಲ್ಲಿ ಸಂಸ್ಥಾಪಕರ ದಿನವನ್ನು ಆಯೋಜಿಸಲಾಯಿತು. ಸಂಸ್ಥಾಪಕರ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವು ಕಣಚೂರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಯು. ಕಣಚೂರು ಮೋನು ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದ ಮೂಲಕ ಸಾಮಾಜಿಕ ಧ್ಯೇಯದೊಂದಿಗೆ ಪ್ರಸ್ತುತ 112ಕ್ಕೂ ಮಿಕ್ಕಿ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ಸಾಮಾಜಿಕ ಕಳಕಳಿಯೊಂದಿಗೆ ನೀಡುತ್ತಿರುವ ಸೇವೆಯನ್ನು ಪರಿಗಣಿಸಿ ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರಿಗೆ ಕರ್ನಾಟಕ ಸರ್ಕಾರದ ನೌಕರರ ರಾಜ್ಯ ವಿಮಾ (ಇಎಸ್ಐ) ವೈದ್ಯಕೀಯ ಸೇವೆಗಳ ಆಯುಕ್ತ ಡಾ| ದಿನೇಶ್ ಕುಮಾರ್ ವೈ.ಕೆ. ರವರು ಕಣಚೂರು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಸಲಹಾ ಸಮಿತಿ ಚೇರ್ಮೆನ್ ಹಾಗೂ ಕಣ್ಣೂರು ವಿಶ್ವವಿದ್ಯಾಲಯ ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಡಾ| ಎಂ. ಅಬ್ದುಲ್ ರಹಿಮಾನ್ ರವರ ಗೌರವ ಉಪಸ್ಥಿತಿಯಲ್ಲಿ “ವಿಶಿಷ್ಟ ಸೇವಾ ಪ್ರಶಸ್ತಿ” ನೀಡುವುದರ ಮೂಲಕ ಗೌರವಿಸಿದರು.
ಈ ಸನ್ಮಾನ ಕಾರ್ಯಕ್ರಮದಲ್ಲಿ ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ನಿರ್ದೇಶಕರು ಅಬ್ದುಲ್ ರಹಿಮಾನ್, ಟ್ರಸ್ಟಿಗಳಾದ ಸಾಹದಾ ರಹಿಮಾನ್, ಉಮಯಾ ಬಾನು ಆರಿಫ್, ಫರೀದಾ ನಸೀರ್ ಹಾಗೂ ಡಾ| ಅಬಿದಾ ಹಾಶಿಂ , ಕಣಚೂರು ಹೆಲ್ತ್ ಸೈನ್ಸಸ್ ಸಲಹಾ ಮಂಡಳಿ, ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಅಧ್ಯಕ್ಷರು ಡಾ| ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಕಣಚೂರು ಹೆಲ್ತ್ ಸೈನ್ಸಸ್ ಸಲಹಾ ಮಂಡಳಿ ಸದಸ್ಯ ಡಾ| ಎಂ. ವೆಂಕಟರಾಯ ಪ್ರಭು, ಮುಖ್ಯ ಆಡಳಿಧಿಕಾರಿ ಡಾ| ರೋಹನ್ ಎಸ್. ಮೊನಿಸ್ ಉಪಸ್ಥಿತರಿದ್ದರು.
ಶ್ರೀಯುತರು ಸಹಕಾರ ಕ್ಷೇತ್ರದ ಜೊತೆಗೆ ಸಾಮಾಜಿಕ, ಧಾರ್ಮಿಕ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಸಲ್ಲಿಸಿದ ಅನನ್ಯ ಸೇವೆಗೆ ಅನೇಕ ರಾಷ್ಟೀಯ, ರಾಜ್ಯ ಮಟ್ಟದ ಪ್ರಶಸ್ತಿಗಳಿಂದ ಪುರಸ್ಕ್ರತರಾಗಿದ್ದಾರೆ. ಇವರಿಗೆ “ಸಹಕಾರ ರತ್ನ ಪ್ರಶಸ್ತಿ” “ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ”, “ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ”, “ಸಮಾಜ ರತ್ನ ಪ್ರಶಸ್ತಿ””, “ಸಜ್ಜನ – ಚಂದನ ಸದ್ಭಾವನಾ ರಾಜ್ಯ ಪ್ರಶಸ್ತಿ”, “ಪರಿವರ್ತನಶ್ರೀ ರಾಜ್ಯ ಪ್ರಶಸ್ತಿ”, “ಭಾರತ ರತ್ನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರಾಷ್ಟೀಯ ಪ್ರಶಸ್ತಿ”, “ಐಐಬಿ ಬೆಸ್ಟ್ ಬುಸಿನೆಸ್ ಲೀಡರ್ಶಿಪ್ ಅವಾರ್ಡ್ -2023 ಪ್ರಶಸ್ತಿ”, “ತೌಳವ ಸಹಕಾರಿ ಮಾಣಿಕ್ಯ”, “ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ”, ಜೊತೆಯಲ್ಲಿ ಸಂಘ -ಸಂಸ್ಥೆಗಳಲ್ಲಿ ಸಕ್ರೀಯವಾಗಿರುವ ಇವರನ್ನು ಹಲವಾರು ಸಹಕಾರ ಸಂಘ- ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದೆ.
ಸಂಘದ ಸಕ್ರೀಯ ಚಟುವಟಿಕೆಯೊಂದಿಗೆ ಅಧ್ಯಕ್ಷರ ಕ್ರಿಯಾಶೀಲತೆಯು ಉಲ್ಲೇಖನೀಯ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಮೂರನೇ ಬಾರಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವ ಇವರು, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ (ನಿ.) ಬೆಂಗಳೂರು ಇದರ ಆಡಳಿತ ಮಂಡಳಿಗೆ ಮೈಸೂರು ವಿಭಾಗದಿಂದ ಕರಾವಳಿ ಕ್ಷೇತ್ರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಥಮ ಬಾರಿಗೆ ನಿರ್ದೇಶಕರಾಗಿ ಬಹುಮತದಿಂದ ಆಯ್ಕೆಯಾದವರು. ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೆಬಲ್ ಟ್ರಸ್ಟ್ (ರಿ.) ಇದರ ಟ್ರಸ್ಟಿಯಾಗಿ, ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾಗಿ, ದ. ಕ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಮಂಗಳೂರು ಇದರ ನಿರ್ದೇಶಕರಾಗಿ ಆಯ್ಕೆ, ದ.ಕ. ಜಿಲ್ಲಾ ಸಗಟು ಮಾರಾಟ ಸಹಕಾರ ಸಂಘ ಇದರ ಮಾಜಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ರವರ ಮುಂದಾಳತ್ವದಲ್ಲಿ ಮಹಿಳಾ ಸಬಲೀಕರಣ ದೃಷ್ಟಿಯಿಂದ ಮಾಡುತ್ತಿರುವಸೇವೆ ಅನನ್ಯ. ಸಂಘದ ವಿಶೇಷತೆ ಶೇ. 100 ರಷ್ಟು ಹಿಂದುಳಿದ ವರ್ಗಕ್ಕೆ ಸೇರಿದ ಸಿಬ್ಬಂದಿಗಳು ಉದ್ಯೋಗದಲ್ಲಿದ್ದು, ಇದರಲ್ಲಿ ಶೇ.60 ರಷ್ಟು ಏಕ ಪೋಷಕರನ್ನು ಹೊಂದಿದ್ದು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಿಂದ ಸ್ವಚ್ಚತಾ ಸಿಬ್ಬಂದಿಯವರೆಗೆ ಸಂಘದಲ್ಲಿ ಶೇ.95 ರಷು ಮಹಿಳಾ ಸಿಬ್ಬಂದಿಗಳೇ ಇದ್ದು ಮಹಿಳೆಯರ ಮುಖಾಂತರ ಸಂಘದ ವ್ಯವಹಾರ ನಡೆಸುತ್ತಿರುವುದು ಅನುಕರಣೀಯ. ಶ್ರೀಯುತರು ಆತ್ಮಶಕ್ತಿ ಸಹಕಾರಿ ಸಂಘ ಹಾಗೂ ಇತರ ಸಂಘಗಳ ಮೂಲಕ ಸುಮಾರು 112ಕ್ಕೂ ಮಿಕ್ಕಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಆ ಮೂಲಕ 950ಕ್ಕೂ ಮಿಕ್ಕಿ ಕಣ್ಣಿನ ಕ್ಯಾಟ್ರಾಕ್ಟ್ ಚಿಕಿತ್ಸೆ, ಉಚಿತ ಔಷಧಿ, ಶಸ್ತ್ರ ಚಿಕಿತ್ಸಾ ವೆಚ್ಚ ಹಾಗೂ 21000ಕ್ಕೂ ಮಿಕ್ಕಿ ಕನ್ನಡಕವನ್ನೂ ಉಚಿತವಾಗಿ ವಿತರಿಸಿರುವುದಷ್ಟೆ ಅಲ್ಲದೇ ಉಚಿತ ಆರೋಗ್ಯ ಕಾರ್ಡನ್ನು ಬಡ ಕುಟುಂಬಗಳಿಗೆ ಪ್ರತಿ ವರ್ಷ ವಿತರಿಸುವುದು. ಅಸಹಾಯಕ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಪ್ರತಿ ವರ್ಷ ಸರಕಾರಿ ಕಾಲೇಜುಗಳಿಗೆ ನೇರವಾಗಿ ವಿದ್ಯಾರ್ಥಿಗಳ ದಾಖಲಾತಿ ಮತ್ತು ಪರೀಕ್ಷಾ ಶುಲ್ಕಗಳನ್ನು ಪಾವತಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಶಕ್ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮೂಲಕ ಕರಾವಳಿ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಪ್ರೇರಣಾ ಶಿಬಿರವನ್ನು ಕಳೆದ 12 ವರ್ಷ ದಿಂದ ಆಯೋಜಿಸಿ ಸುಮಾರು 100 ಬಡ ಅರ್ಹ ವಿದ್ಯಾರ್ಥಿಗಳನ್ನು ಈ ಶಿಬಿರದಿಂದ ಆಯ್ಕೆ ಮಾಡಿ ಅವರಿಗೆ ಉಚಿತವಾಗಿ IಂS / ಏಂS ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾಗವಹಿಸಲು ಉಚಿತ ತರಬೇತಿ ನೀಡುವುದರ ಜೊತೆಗೆ ಸರ್ಕಾರಿ ಪ್ರೌಡ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡವಿಧ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮಾದರಿ ಪ್ರಶ್ನೋತ್ತರಗಳನ್ನು ದಿನಪತ್ರಿಕೆಗಳ ಸಹಯೋಗದೊಂದಿಗೆ ವಿತರಿಸುತ್ತಾ ಬರುತ್ತಿದ್ದಾರೆ.
ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್ ಡಾ| ಶಹನವಾಝ್ ಮಣಿಪಾಡಿ ಸ್ವಾಗತಿಸಿದರು. ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲೆ ಡಾ| ವಿದ್ಯಾಪ್ರಭಾ ಆರ್ ವಂದಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು










