ಮಂಗಳೂರು : ನೀಟ್ ಪರೀಕ್ಷಾ ಅಕ್ರಮಗಳನ್ನು ಪ್ರಶ್ನಿಸುವುದು ಪ್ರತಿಪಕ್ಷಗಳ ಪ್ರಜಾಸತ್ತಾತ್ಮಕ ಹಕ್ಕಾಗಿದೆ. ಪರೀಕ್ಷಾರ್ಥಿಗಳ ಪರವಾಗಿ ಧ್ವನಿ ಎತ್ತುತ್ತಿರುವ ವಿದ್ಯಾರ್ಥಿಗಳು, ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಆಡಳಿತಾರೂಢ ಕೇಂದ್ರ ಸರ್ಕಾರ ನಡೆದುಕೊಂಡಿರುವ ರೀತಿ ತೀವ್ರ ಖಂಡನೀಯ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ವಾಗ್ದಾಳಿ ನಡೆಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷೆಯ ಅಕ್ರಮದ ವಿರುದ್ಧ ಬೀದಿಗಿಳಿದ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ಖಂಡಿಸುವ ಬದಲು, ಧರಣಿ ನಿರತರನ್ನು ಅಪಹಾಸ್ಯ ಮಾಡುವುದು ಮತ್ತು ಅವರನ್ನು ದೇಶದ್ರೋಹಿಗಳಂತೆ ಬಿಂಬಿಸುವುದು ಆಡಳಿತ ಪಕ್ಷಕ್ಕೆ ಶೋಭೆ ತರುವುದಿಲ್ಲ. ಪ್ರೇಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ 21 ವಿದ್ಯಾರ್ಥಿಗಳ ಕುಟುಂಬಗಳ ನೋವನ್ನು ಸರ್ಕಾರ ಅರ್ಥೈಸಿಕೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದರು.
ಹಿಂದೆ ಬೋಫೋರ್ಸ್ ಆರೋಪ ಬಂದಾಗ ಅಂದಿನ ಕಾಂಗ್ರೆಸ್ ಸರ್ಕಾರ ಜಂಟಿ ಸಂಸದೀಯ ಸಮಿತಿ (JPC) ತನಿಖೆಗೆ ಆದೇಶಿಸಿತ್ತು. ಆದರೆ ಪ್ರಸ್ತುತ ಯುದ್ಧ ವಿಮಾನಗಳ ಹಗರಣ ಅಥವಾ ನೀಟ್ ಅಕ್ರಮದ ವಿಷಯ ಬಂದಾಗ ಕೇಂದ್ರ ಸರ್ಕಾರ ಜೆಪಿಸಿ ತನಿಖೆಗೆ ಹಿಂಜರಿಯುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆಯೇ ಗೌರವವಿಲ್ಲದಂತೆ ವರ್ತಿಸುತ್ತಿದೆ. ಈ ಅಕ್ರಮ ಹಾಗೂ ಸರ್ಕಾರದ ನಡೆಯನ್ನು ಪ್ರತಿಯೊಬ್ಬ ನಾಗರಿಕರೂ ಸಾರ್ವಜನಿಕವಾಗಿ ಚರ್ಚಿಸಬೇಕಾದ ಅಗತ್ಯವಿದೆ ಎಂದು ಕರೆ ನೀಡಿದರು.
ನ್ಯಾಯ ಕೇಳಲು ಹೊರಟ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಅರಾಜಕತೆ ಎಂದು ಕರೆಯುತ್ತಿರುವ ಆಡಳಿತ ಪಕ್ಷದ ಧೋರಣೆಯನ್ನು ಪ್ರಶ್ನಿಸಿದ ಅವರು, ಹಿಂದೆ ಅಣ್ಣಾ ಹಜಾರೆ ಪ್ರತಿಭಟನೆ ನಡೆಸಿದಾಗಲೂ ಹೀಗೆಯೇ ಹೇಳಲಾಗಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು. ಅಧಿಕಾರದಲ್ಲಿ ಶಾಶ್ವತವಾಗಿ ಉಳಿಯಲು ಅಪಪ್ರಚಾರ ನಡೆಸುತ್ತಿರುವ ಸರ್ಕಾರಕ್ಕೆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ನೀಟ್ ವ್ಯವಸ್ಥೆಯ ಸಮಗ್ರ ಸುಧಾರಣೆ ಮತ್ತು ಈವರೆಗಿನ ತನಿಖೆಯಲ್ಲಿ ತಪ್ಪಿತಸ್ಥರಿಗೆ ಸಿಕ್ಕ ಶಿಕ್ಷೆಯ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಬೇಬಿ ಕುಂದರ್, ಶಾಹುಲ್ ಹಮೀದ್, ಪೃಥ್ವಿರಾಜ್, ವಿಕಾಸ್ ಶೆಟ್ಟಿ, ಪ್ರಕಾಶ್ ಸಾಲ್ಯಾನ್, ಇಬ್ರಾಹೀಂ ನವಾಝ್, ನಝೀರ್ ಬಜಾಲ್ ಹಾಗೂ ಶಬೀರ್ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










