ನೇಪರ್ವಿಲ್ಲೆ : ಅಮೆರಿಕದ ಇಲಿನಾಯ್ಸ್ನ ನೇಪರ್ವಿಲ್ಲೆಯಲ್ಲಿರುವ ಯೆಲ್ಲೋ ಬಾಕ್ಸ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಅಮೆರಿಕನ್ ಮಲ್ಟಿ ಎಥಿಕ್ ಕಮಿಷನ್ (AMEC)ನ 15ನೇ ವಾರ್ಷಿಕ ಕಾಂಗ್ರೆಷನಲ್ ಗ್ಲೋಬಲ್ ಚಾಂಪಿಯನ್ಸ್ ಗಾಲಾ ಸಮಾರಂಭದಲ್ಲಿ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಅವರಿಗೆ ಪ್ರತಿಷ್ಠಿತ ‘ಗ್ಲೋಬಲ್ ಸಿಟಿಝನ್ ಲೀಡರ್ಶಿಪ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಚಿವರು, ಈ ಪುರಸ್ಕಾರವು ತಮಗೆ ಅಪಾರ ಸಂತಸ ಹಾಗೂ ಹೆಮ್ಮೆಯನ್ನು ತಂದಿದೆ ಎಂದರು. ಸಾರ್ವಜನಿಕ ಸೇವೆಯ ಹಾದಿಯಲ್ಲಿ ತಾವು ಕೈಗೊಂಡ ಪ್ರಯತ್ನಗಳಿಗೆ ಸಿಕ್ಕ ಪ್ರೋತ್ಸಾಹ ಮತ್ತು ಜನರ ನಂಬಿಕೆಗೆ ದೊರೆತ ಗೌರವ ಇದಾಗಿದ್ದು, ಇದನ್ನು ಇಡೀ ಕರ್ನಾಟಕದ ಜನತೆಗೆ ಸಮರ್ಪಿಸುವುದಾಗಿ ಹೇಳಿದರು.
ಸಾರ್ವಜನಿಕ ಸೇವೆಯಲ್ಲಿ ಸುದೀರ್ಘ ಅನುಭವ, ಆರೋಗ್ಯ ಕ್ಷೇತ್ರದಲ್ಲಿ ತೋರಿದ ಸಮರ್ಥ ನಾಯಕತ್ವ, ಪಾರದರ್ಶಕ ಆಡಳಿತ ಹಾಗೂ ಸಮುದಾಯ ಅಭಿವೃದ್ಧಿಗೆ ನೀಡಿದ ಅಪ್ರತಿಮ ಕೊಡುಗೆಗಳನ್ನು ಪರಿಗಣಿಸಿ AMEC ಸಂಸ್ಥೆಯು ಖಾದರ್ ಅವರನ್ನು ಈ ಜಾಗತಿಕ ಪುರಸ್ಕಾರಕ್ಕೆ ಆಯ್ಕೆ ಮಾಡಿತ್ತು. ಕಾರ್ಯಕ್ರಮದಲ್ಲಿ AMEC ಸಂಸ್ಥಾಪಕ ಅಧ್ಯಕ್ಷ ಹಾಗೂ ಜಾಗತಿಕ ಕಾರ್ಯತಂತ್ರ ಒಕ್ಕೂಟದ ಮುಖ್ಯಸ್ಥ ಡಾ. ವಿಜಯ್ ಜಿ. ಪ್ರಭಾಕರ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ಅಮೆರಿಕ ಪ್ರವಾಸದಲ್ಲಿರುವ ಸಚಿವ ಖಾದರ್, ಜುಲೈ 27ರಂದು ಇಂಡಿಯಾನಾದ ವೆಸ್ಟ್ ಲಫಯೆಟ್ಟೆಯ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ‘ಆರೋಗ್ಯಕರ ಮಕ್ಕಳು, ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಭವಿಷ್ಯ’ ವಿಷಯದ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ತದನಂತರ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡಿ ಪ್ರಮುಖ ನಾಯಕರು ಹಾಗೂ ವಿವಿಧ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ, ಜುಲೈ 30ರಂದು ಬೆಂಗಳೂರಿಗೆ ಹಿಂತಿರುಗಲಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ವಿದೇಶ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










