ಬಂಟ್ವಾಳ : ಜುಲೈ 16ರಂದು ಬಿ.ಸಿ.ರೋಡಿನ KSRTC ಬಸ್ ನಿಲ್ದಾಣದಲ್ಲಿ ನಡೆದಿದ್ದ ಕಕ್ಯಪದವಿನ ಲಾವಣ್ಯ ಎಂಬ ಯುವತಿಯ ದ್ವೇಷದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆಯ ಪ್ರಮುಖ ಆರೋಪಿ ಚೇತನ್ ನನ್ನು ಬಂಟ್ವಾಳ ನಗರ ಪೊಲೀಸರು ಸೋಮವಾರ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಮಾರಕಾಸ್ತ್ರದಿಂದ ದಾರುಣವಾಗಿ ಹಲ್ಲೆ ನಡೆಸಿ ಯುವತಿಯನ್ನು ಹತ್ಯೆಗೈದಿದ್ದ ಬೆಳ್ತಂಗಡಿಯ ಓಡಿಲ್ನಾಳ ನಿವಾಸಿ ಚೇತನ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕೃತ್ಯ ಎಸಗಿದ ತಕ್ಷಣವೇ ಆರೋಪಿಯು ಕಾರಿನಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದರೂ, ಮರುದಿನವೇ ಮಂಗಳೂರಿನಲ್ಲಿ ಆತನನ್ನು ಪೊಲೀಸರು ಪತ್ತೆಹಚ್ಚಿದ್ದರು. ಆದರೆ ಬಂಧನದ ವೇಳೆ ಆತ ಇಲಿ ಪಾಷಾಣ ಸೇವಿಸಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ತಕ್ಷಣ ಆತನನ್ನು ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ತದನಂತರ ವೈದ್ಯರ ತುರ್ತು ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಸುಮಾರು 11 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಆರೋಪಿಯ ಆರೋಗ್ಯ ಸ್ಥಿತಿ ಸುಧಾರಿಸಿ, ಸಾಮಾನ್ಯ ವಾರ್ಡ್ಗೆ ಬದಲಾಯಿಸಿದ ಬಳಿಕ ಆತನನ್ನು ವಶಕ್ಕೆ ಪಡೆಯಲಾಗಿದೆ. ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ಆತನನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಜ್ಜಾಗಿದ್ದಾರೆ. ಬಂಟ್ವಾಳ ಎಎಸ್ಪಿ ಯಶ್ ಕುಮಾರ್ ಶರ್ಮ ಅವರ ಮಾರ್ಗದರ್ಶನದಲ್ಲಿ, ನಗರ ಠಾಣೆಯ ಇನ್ಸ್ಪೆಕ್ಟರ್ ಆನಂದಪದ್ಮನಾಭ ಅವರ ನೇತೃತ್ವದ ತಂಡ ಈ ಭೀಕರ ಕೊಲೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










