ಮಂಗಳೂರು : ಜಿಲ್ಲಾ ಕಾರಾಗೃಹಕ್ಕೆ ಮರಳುತ್ತಿದ್ದ ಕೈದಿಯೊಬ್ಬ ತಪಾಸಣೆ ವೇಳೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಆತ ಮಾಡಿದ್ದ ಕೃತ್ಯ ಜೈಲು ಸಿಬ್ಬಂದಿಯನ್ನೇ ಬೆರಗುಗೊಳಿಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಗಿಸಿ ವಾಪಸ್ ಬರುತ್ತಿದ್ದ ಮುಹಮ್ಮದ್ ತೋಹಿದ್ ಎಂಬ ಕೈದಿ, ಕಾರಾಗೃಹದ ಒಳಗೆ ಮೊಬೈಲ್ ಕೊಂಡೊಯ್ಯಲು ಅದನ್ನು ತನ್ನ ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡು ಅತೀ ಚಾಣಾಕ್ಷತನ ಮೆರೆಯಲು ಹೋಗಿ ಜೈಲು ಪಾಲಾಗುವ ಮುನ್ನವೇ ಸಿಕ್ಕಿಬಿದ್ದಿದ್ದಾನೆ.
ವಿಚಾರಾಧೀನ ಕೈದಿಯಾಗಿದ್ದ ತೋಹಿದ್ನನ್ನು ಅನಾರೋಗ್ಯದ ಕಾರಣದಿಂದ ಏಪ್ರಿಲ್ 24ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಐದು ದಿನಗಳ ಕಾಲ ಒಳರೋಗಿಯಾಗಿ ಚಿಕಿತ್ಸೆ ಪಡೆದ ಆತ, ಏಪ್ರಿಲ್ 29ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದನು. ಸಂಜೆ ವೇಳೆ ಆತನನ್ನು ಪೊಲೀಸರು ಕೊಡಿಯಾಲ್ಬೈಲಿನಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಕರೆತಂದಿದ್ದರು. ಜೈಲಿನ ಮುಖ್ಯ ದ್ವಾರದ ಬಳಿ ಭದ್ರತಾ ನಿಯಮದಂತೆ ಕೈದಿಯನ್ನು ತಪಾಸಣೆ ನಡೆಸುವಾಗ ಈ ಅಕ್ರಮ ಬೆಳಕಿಗೆ ಬಂದಿದೆ.
ಕಾರಾಗೃಹದ ಪ್ರವೇಶ ದ್ವಾರದಲ್ಲಿ ಕರ್ತವ್ಯದಲ್ಲಿದ್ದ ಕೆ.ಎಸ್.ಐ.ಎಸ್.ಎಫ್ (KSISF) ಸಿಬ್ಬಂದಿಯು ಮೆಟಲ್ ಡಿಟೆಕ್ಟರ್ ಯಂತ್ರದ ಮೂಲಕ ತಪಾಸಣೆ ನಡೆಸುತ್ತಿದ್ದಾಗ, ಕೈದಿಯ ಗುದದ್ವಾರದ ಭಾಗದಲ್ಲಿ ಯಂತ್ರವು ಸದ್ದು ಮಾಡಿದೆ. ಇದರಿಂದ ಸಂಶಯಗೊಂಡ ಸಿಬ್ಬಂದಿ ತೀವ್ರವಾಗಿ ವಿಚಾರಣೆ ನಡೆಸಿದಾಗ, ತಾನು ಮೊಬೈಲ್ ಅಡಗಿಸಿಟ್ಟಿರುವುದಾಗಿ ತೋಹಿದ್ ಒಪ್ಪಿಕೊಂಡಿದ್ದಾನೆ. ಕೂಡಲೇ ಆತನನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ದು, ವೈದ್ಯರ ಸಹಾಯದಿಂದ ಆತನ ದೇಹದ ಒಳಗಿದ್ದ ಕೀ-ಪ್ಯಾಡ್ ಮೊಬೈಲನ್ನು ಸುರಕ್ಷಿತವಾಗಿ ಹೊರಗೆ ತೆಗೆಯಲಾಗಿದೆ. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು









