ಬಂಟ್ವಾಳ : ಅಮ್ಮುಂಜೆ ಗ್ರಾಮದ ಪಾಂಡೀಲಿ ಎಂಬಲ್ಲಿ ನಡೆದಿದ್ದ ವೃದ್ಧೆಯ ಬರ್ಬರ ಕೊಲೆ ಮತ್ತು ಚಿನ್ನಾಭರಣ ದೋಚಿದ ಕುಖ್ಯಾತ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ ಮಂಗಳೂರಿನ ಎರಡನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ಮಂಗಳವಾರ ಮಹತ್ವದ ತೀರ್ಪು ಪ್ರಕಟಿಸಿದೆ. ಕೃತ್ಯ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅಮ್ಮಾಡಿ ಗ್ರಾಮದ ಏಲ್ಮಾ ಪ್ರಶ್ಚಿತಾ ಬರೆಟ್ಟೋ (23), ನರಿಕೊಂಬು ಗ್ರಾಮದ ಚರಣ್ ಕುಮಾರ್ (31) ಹಾಗೂ ಸತೀಶ ಎ.ಆರ್. (28) ಎಂಬ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಆರೋಪಿತೆಯು ವೃದ್ಧೆಯ ಆರೈಕೆಗಾಗಿ ಆಕೆಯ ಮನೆಯಲ್ಲೇ ಕೆಲಸ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ವೃದ್ಧೆಯ ಮೈಮೇಲಿದ್ದ ಚಿನ್ನದ ಕರಿಮಣಿ ಸರ ಹಾಗೂ ಮನೆಯಲ್ಲಿದ್ದ ಇತರ ಆಭರಣಗಳ ಮೇಲೆ ಕಣ್ಣಿಟ್ಟಿದ್ದ ಆಕೆ, ಹೇಗಾದರೂ ಮಾಡಿ ಇವನ್ನು ದೋಚಲು ತನ್ನ ಸಹಚರರೊಂದಿಗೆ ಸಂಚು ರೂಪಿಸಿದ್ದಳು. ಮೊದಲು ವೃದ್ಧೆಯನ್ನು ಹತ್ಯೆ ಮಾಡಲು ಹಿದಿಡಲು ಯತ್ನಿಸಿ, ನಂತರ ಸ್ನೇಹಿತರ ಮೂಲಕ ಅಂಗಡಿಯಿಂದ ಮಾರಕ ವಿಷ ಪದಾರ್ಥವನ್ನು ತರಿಸಿ ಆಹಾರದಲ್ಲಿ ಬೆರೆಸಿ ನೀಡಿದ್ದಳು. ಆದರೆ ವೃದ್ಧೆ ಸಾವನ್ನಪ್ಪದ ಕಾರಣ, ತನ್ನ ಮತ್ತೊಬ್ಬ ಸಹಚರನ ಸಹಾಯ ಪಡೆದುಕೊಂಡು ರಾತ್ರಿಯ ವೇಳೆ ವೃದ್ಧೆಯ ಬಾಯಿ ಹಾಗೂ ಮೂಗಿಗೆ ದಿಂಬು ಮತ್ತು ಬಟ್ಟೆಯಿಂದ ಒತ್ತಿ ಉಸಿರುಗಟ್ಟಿಸಿ ಸಾಯಿಸಿದ್ದರು. ಬಳಿಕ ಮೃತಳ ಮೈಯಲ್ಲಿದ್ದ ಹಾಗೂ ಮನೆಯಲ್ಲಿದ್ದ ಸುಮಾರು 61 ಗ್ರಾಂ ಗೂ ಅಧಿಕ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಈ ಕುರಿತು ಅಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ಅವರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದರು. ನಂತರ ವೃತ್ತ ನಿರೀಕ್ಷಕರಾದ ಟಿ.ಡಿ. ನಾಗರಾಜ್ ಅವರು ಎಲ್ಲ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಸರಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ್ ನಾಯಕ್ ಅವರು ಬಲವಾದ ವಾದ ಮಂಡನೆ ಮಾಡಿ ಸರಕಾರದ ಪರವಾಗಿ ಸಾಕ್ಷ್ಯಗಳನ್ನು ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










