ಬಂಟ್ವಾಳ : ಬಿ.ಸಿ.ರೋಡು–ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗುಂಡಿ ಪ್ರದೇಶದಲ್ಲಿ, ರಸ್ತೆ ಬದಿಯ ತೋಡಿನಲ್ಲಿ ಪ್ರಾಣಿಗಳ ತ್ಯಾಜ್ಯ ಪತ್ತೆಯಾಗಿದ್ದು ಸ್ಥಳೀಯರಲ್ಲಿ ತೀವ್ರ ಕಳವಳ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಯಾರೋ ಕಿಡಿಗೇಡಿಗಳು ಪ್ರಾಣಿಯೊಂದನ್ನು ವಧೆ ಮಾಡಿದ ನಂತರ ಅದರ ಕರುಳು ಮತ್ತು ಇತರ ತ್ಯಾಜ್ಯ ಭಾಗಗಳನ್ನು ತಂದು ಹೆದ್ದಾರಿ ಬದಿಯ ತೋಡಿಗೆ ಸುರಿದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ದುಷ್ಕೃತ್ಯದ ಕುರಿತು ಸಾರ್ವಜನಿಕರು ತಕ್ಷಣವೇ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ.
ಸ್ಥಳದಲ್ಲಿ ಪತ್ತೆಯಾಗಿರುವ ಅವಶೇಷಗಳ ಬಗ್ಗೆ ಅನುಮಾನಗಳಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಅಗತ್ಯಬಿದ್ದರೆ ವೈದ್ಯಕೀಯ ಅಥವಾ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ ಇವು ಯಾವ ಪ್ರಾಣಿಯ ತ್ಯಾಜ್ಯ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸದಾನಂದ ನಾವೂರು ಆಗ್ರಹಿಸಿದ್ದಾರೆ.
ಸಮೀಪದಲ್ಲೇ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಕಸಾಯಿಖಾನೆಗಳಿಂದ ಈ ತ್ಯಾಜ್ಯವನ್ನು ತಂದು ರಾತ್ರೋರಾತ್ರಿ ಎಸೆದಿರುವ ಸಾಧ್ಯತೆಯಿದೆ ಎನ್ನಲಾಗಿದ್ದು, ಈ ಕುರಿತು ಈಗಾಗಲೇ ಸಂಬಂಧಪಟ್ಟ ಬೀಟ್ ಪೊಲೀಸರ ಗಮನಕ್ಕೂ ತರಲಾಗಿದೆ.
ತೋಡಿನಲ್ಲಿ ದುರ್ನಾತ ಬೀರುವಂತೆ ತ್ಯಾಜ್ಯ ಎಸೆದ ಕಿಡಿಗೇಡಿಗಳನ್ನು ಶೀಘ್ರವೇ ಪತ್ತೆಹಚ್ಚಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಡಗುಂಡಿಯ ಸ್ಥಳೀಯ ನಿವಾಸಿಗಳು ಗಟ್ಟಿಯಾಗಿ ಒತ್ತಾಯಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









